ಕಾರವಾರ, ಮೇ. 11 (DaijiworldNews/AA): ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಷಿಯನ್ ಮಾದರಿಯ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾಗಿದ್ದು, 22 ಮೀನುಗಾರರನ್ನು ರಕ್ಷಿಸಲಾಗಿದೆ.

ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಘಟನೆ ವೇಳೆ ಬೋಟ್ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಸಮೀಪವೇ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮುದಗಾದ ದಿನೇಶ್ ಕಾಂಚನ್ ಎಂಬವರ ಮಾಲೀಕತ್ವದ ಶ್ರೀ ಅಮ್ಮ ಹೆಸರಿನ ಪರ್ಷಿಯನ್ ಬೋಟ್ ಮುಳುಗಡೆಯಾಗಿದೆ. ಈ ಬೋಟ್ ಕಾರವಾರದ ಮುದಗಾ ಬಂದರಿನಿಂದ ಒಂದು ವಾರದ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಬೋಟ್ ಮುಳುಗಡೆ ಪರಿಣಾಮ ಬೋಟ್ ಹಾಗೂ ಬಲೆ ಸೇರಿ ಕೋಟ್ಯಂತರ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.