ಬೆಳಗಾವಿ, ಮೇ. 11 (DaijiworldNews/AA): ಬೆಳಗಾವಿಯ ಅಥಣಿ ತಾಲೂಕಿನ ಸವದಿ ಗ್ರಾಮದ ರೈತನ ಮಗನಾದ ಬಸವರಾಜ ಧರೆಪ್ಪ ಕೆಂಪವಾಡ ಅವರು ಯುಪಿಎಸ್ಸಿ ನಡೆಸಿದ ಪ್ರತಿಷ್ಠಿತ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಮೇ 8 ರಂದು ಪ್ರಕಟವಾದ ಫಲಿತಾಂಶದಲ್ಲಿ ಬಸವರಾಜ್ ಈ ಸಾಧನೆ ಮಾಡಿದ್ದಾರೆ. ಒಬ್ಬ ಸಾಮಾನ್ಯ ರೈತನ ಮಗನಾಗಿ, ಗ್ರಾಮೀಣ ಹಿನ್ನೆಲೆಯಿಂದ ಬಂದು ಈ ಸಾಧನೆ ಮಾಡುವ ಮೂಲಕ ಅನೇಕ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.
ಬಸವರಾಜ್ ತನ್ನ ಪ್ರಾಥಮಿಕ ಶಿಕ್ಷಣ ಸವದಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರೈಸಿದ್ದು, ಬಳಿಕ ಅಥಣಿಯಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿದ್ದ. ಶಿರಸಿಯಲ್ಲಿ ಪದವಿ ಮುಗಿಸಿ, ಯುಪಿಎಸ್ಸಿ ಪರೀಕ್ಷೆ ಬರೆಯುವ ಹಂಬಲದಿಂದ ಬೆಂಗಳೂರಿಗೆ ತೆರಳಿದರು.
ವಿಶೇಷವೆಂದರೆ, ಬಸವರಾಜ್ ಅವರು ಯಾವುದೇ ಪ್ರತಿಷ್ಠಿತ ಕೋಚಿಂಗ್ ಸೆಂಟರ್ಗಳಿಗೆ ಸೇರದೇ ಸ್ವಯಂ ಅಧ್ಯಯನದ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬಸವರಾಜ್ ತನ್ನ ಎರಡನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
"ನಾನು ಗ್ರಾಮೀಣ ಭಾಗದವನು. ಮೊರಾರ್ಜಿ ಶಾಲೆಯಲ್ಲಿ ಓದಿದವನು. ಗುರಿ ತಲುಪುವ ಛಲವಿದ್ದರೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನನ್ನ ಸಾಧನೆಯೇ ಸಾಕ್ಷಿ. ಈ ಹಂತ ತಲುಪಿದ್ದು ನನಗೆ ಅಪಾರ ಹೆಮ್ಮೆ ತಂದಿದೆ" ಎಂದು ಬಸವರಾಜ್ ಅವರು ತಿಳಿಸಿದ್ದಾರೆ.
"ನಾವು ಸಣ್ಣ ರೈತ ಕುಟುಂಬದವರು. ಆರ್ಥಿಕ ಮುಗ್ಗಟ್ಟಿದ್ದರೂ ಮಕ್ಕಳ ಶಿಕ್ಷಣಕ್ಕೆ ಎಂದೂ ಕೊರತೆ ಮಾಡಲಿಲ್ಲ. ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆದು ಕಷ್ಟಪಟ್ಟು ಮಗನನ್ನು ಓದಿಸಿದೆ. ಇಂದು ಅವನ ಸಾಧನೆಯಿಂದ ನಮ್ಮ ಬದುಕು ಸಾರ್ಥಕವಾಯಿತು" ಎಂದು ಬಸವರಾಜ್ ಅವರ ತಂದೆ ಧರೇಪ್ಪ ಕೆಂಪವಾಡ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಬಸವರಾಜ್ ಅವರು ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಗ್ರಾಮಸ್ಥರು ಹಾಗೂ ಸಂಬಂಧಿಕರು ಬಸವರಾಜ್ ಅವರ ಮನೆಗೆ ಧಾವಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.