ಉತ್ತರ ಪ್ರದೇಶ, ಮೇ. 11 (DaijiworldNews/AA): ಯುಪಿಎಸ್ಸಿ ಪರೀಕ್ಷೆ ದೇಶದ ಅತ್ಯಂತ ಕಠಿಣ ಪರೀಕಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಗಾಗಿ ಅಭ್ಯರ್ಥಿಗಳು ತರಬೇತಿ ಪಡೆಯುತ್ತಾರೆ. ಆದರೆ ದಮನ್ಪ್ರೀತ್ ಅರೋರಾ ಅವರು ಸ್ವಯಂ ಅಧ್ಯಯನದ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ 103ನೇ ರ್ಯಾಂಕ್ ಗಳಿಸಿ ಉತ್ತೀರ್ಣರಾಗಿದ್ದಾರೆ.

ಮೂಲತಃ ಚಂಡೀಗಢದವರಾದ ದಮನ್ಪ್ರೀತ್, ಪಂಜಾಬ್ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಇವರ ತಂದೆ ಪಂಜಾಬ್ ಸರ್ಕಾರದಲ್ಲಿ ಅಧಿಕಾರಿಯಾಗಿದ್ದರೆ, ತಾಯಿ ಗೃಹಿಣಿ ಮತ್ತು ಸಹೋದರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ದಮನ್ಪ್ರೀತ್ ಅವರು 2017ರಲ್ಲಿ ತಮ್ಮ ಕಾಲೇಜು ದಿನಗಳಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದರು. 2020ರಲ್ಲಿ ಪಿಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಉದ್ಯೋಗ ಗಳಿಸಿದ್ದರು. ಡಿಸೆಂಬರ್ 2024ರಲ್ಲಿ ಬಿಜ್ನೋರ್ ಜಿಲ್ಲೆಯ ಡಿಪಿಆರ್ಒ ಆಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ಮಾತ್ರ ಅವರು ಕೈಬಿಡಲಿಲ್ಲ.
ಜವಾಬ್ದಾರಿಯುತ ಸರ್ಕಾರಿ ಕೆಲಸದ ನಡುವೆಯೇ ಯುಪಿಎಸ್ಸಿ ಪರೀಕ್ಷೆಗಾಗಿ ದಮನ್ಪ್ರೀತ್ ಅರೋರಾ ಅವರು ಬಿಡುವಿಲ್ಲದೆ ಓದುತ್ತಿದ್ದರು. ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 103ನೇ ರ್ಯಾಂಕ್ ಗಳಿಸುವಲ್ಲಿ ಸಫಲರಾಗುತ್ತಾರೆ. ಅವರು ಯಾವುದೇ ಕೋಚಿಂಗ್ ಸಂಸ್ಥೆಗೆ ಸೇರದೆ ಸ್ವಯಂ ಅಧ್ಯಯನದ ಮೂಲಕವೇ ಪರೀಕ್ಷೆಯನ್ನು ಎದುರಿಸಿ ಗೆದ್ದಿದ್ದಾರೆ. ಈ ಮೂಲಕ ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮವಿದ್ದರೆ ಎಂತಹ ಕಠಿಣ ಸವಾಲುಗಳನ್ನು ಬೇಕಾದರೂ ಎದುರಿಸಬಹುದು ಎಂಬುದಕ್ಕೆ ದಮನ್ಪ್ರೀತ್ ಅರೋರಾ ಅವರೇ ಸಾಕ್ಷಿಯಾಗಿದ್ದಾರೆ.