ಹೈದರಾಬಾದ್, ಮೇ. 10 (DaijiworldNews/AA): ಜನರು ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಯಮದಿಂದ ಬಳಸಿ. ಇದು ಈ ಕ್ಷಣದ ಅಗತ್ಯವಾಗಿದೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, "ನಾವು ಆಮದು ಮಾಡಿಕೊಂಡ ಪೆಟ್ರೋಲಿಯಂ ಉತ್ಪನ್ನಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕಾಗಿದೆ. ಇದು ವಿದೇಶಿ ವಿನಿಮಯವನ್ನು ಉಳಿಸುವುದಲ್ಲದೆ, ಯುದ್ಧದ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುತ್ತದೆ" ಎಂದು ತಿಳಿಸಿದರು.
"ಕಳೆದ ಕೆಲವು ವರ್ಷಗಳಿಂದ, ಸೌರಶಕ್ತಿಯ ವಿಷಯದಲ್ಲಿ ಭಾರತ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದು ಸ್ಥಾನವನ್ನು ತಲುಪಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವಲ್ಲಿ ಅಭೂತಪೂರ್ವ ಕೆಲಸ ಮಾಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಮೆಟ್ರೋ ಮತ್ತು ಬಸ್ಗಳನ್ನು ಜನರು ಹೆಚ್ಚು ಬಳಸಬೇಕು. ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಬೇಕು. ವರ್ಕ್ ಫ್ರಾಂ ಹೋಂನಂತಹ ಕ್ರಮಗಳಿಂದ ಇಂಧನ ಉಳಿತಾಯ ಸಾಧ್ಯ" ಎಂದು ಹೇಳಿದರು.
ದೇಶದ ವಿದೇಶಿ ವಿನಿಮಯ ಸಂಗ್ರಹ ಉಳಿಸಲು ಜನರು ಒಂದು ವರ್ಷ ಚಿನ್ನ ಖರೀದಿಸದಿರುವಂತೆ ಮನವಿ ಮಾಡಿದ ಅವರು, "ದೇಶದಲ್ಲಿ ತಾಮ್ರದ ಕೊರತೆ ಕೂಡ ಹೆಚ್ಚಾಗಿರುವುದರಿಂದ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು ಎಂದಿದ್ದಾರೆ. ಅಲ್ಲದೆ ಅತಿರೇಕದ ಖರ್ಚು ಮತ್ತು ವೈಭವ ಪ್ರದರ್ಶನದಿಂದ ದೂರವಿರಬೇಕು ಎಂದು ಮಧ್ಯಮ ವರ್ಗಕ್ಕೆ ಕಿವಿ ಮಾತು ಹೇಳಿದ ಪ್ರಧಾನಿ, ಸದ್ಯದ ಸಂಕಷ್ಟದ ಸಮಯದಲ್ಲಿ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಿದರೆ ದೇಶದ ಸಂಪತ್ತು ಹೊರಹೋಗುವುದನ್ನು ತಡೆಯಬಹುದು" ಎಂದರು.
"ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಸುಳ್ಳಿನ ರಾಜಕಾರಣ ನಡೆಸುತ್ತಿದೆ. ಪಶ್ಚಿಮ ಬಂಗಾಳದ ಜನರು ಟಿಎಂಸಿ ಹಾಗೂ ಎಡಪಕ್ಷಗಳನ್ನು ತಿರಸ್ಕರಿಸಿ ಮಮತಾ ಬ್ಯಾನರ್ಜಿ ಅವರ ಸರ್ವಾಧಿಕಾರಕ್ಕೆ ತಿರುಗೇಟು ನೀಡಿದೆ. ದೇಶದಾದ್ಯಂತ ಬಿಜೆಪಿ ವಿಸ್ತರಿಸುತ್ತಿದ್ದು, ಕುಟುಂಬ ರಾಜಕಾರಣಕ್ಕಿಂತ ಜನರು ನಂಬಿಕೆಯ ರಾಜಕಾರಣಕ್ಕೆ ಬೆಂಬಲ ನೀಡುತ್ತಿದ್ದಾರೆ. ಒಮ್ಮೆ ಪಕ್ಷದ ಕಾರ್ಯಕರ್ತರೇ ಇಲ್ಲದಿದ್ದ ಪಶ್ಚಿಮ ಬಂಗಾಳದಲ್ಲಿಯೂ ಈಗ ಬಿಜೆಪಿ ಸರ್ಕಾರ ಬಂದಿದೆ" ಎಂದು ವಾಗ್ದಾಳಿ ನಡೆಸಿದರು.