ಗುವಾಹಟಿ, ಮೇ. 10 (DaijiworldNews/AA): ಹಿಮಂತ ಬಿಸ್ವ ಶರ್ಮಾ ಅವರು ಮೇ 12 ರಂದು ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಸ್ಸಾಮ್ ರಾಜಧಾನಿ ಗುವಾಹಟಿಯಲ್ಲಿ ಭಾನುವಾರ ನಡೆದ ಪ್ರಮುಖ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಎಜಿಪಿ ಮತ್ತು ಯುಪಿಪಿಎಲ್ ಶಾಸಕರು ಹಿಮಂತ ಬಿಸ್ವ ಶರ್ಮಾ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಘೋಷಿಸಿದರು. ಅಸ್ಸಾಂನಲ್ಲಿ ಬಿಜೆಪಿಯನ್ನು ಸತತವಾಗಿ ಎರಡನೇ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರ್ಮಾ ಅವರಿಗೆ ಹೈಕಮಾಂಡ್ ಮತ್ತೊಮ್ಮೆ ಅಧಿಕಾರ ವಹಿಸಲಿದೆ.
ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ಅವರ ಹೆಸರನ್ನು ಪ್ರಸ್ತಾಪಿಸಿ ಎಂಟು ನಿರ್ಣಯಗಳ ಸಲ್ಲಿಕೆಯಾಯಿತು. ರಂಜೀತ್ ಕುಮಾರ್ ದಾಸ್, ಬಿಸ್ವಜಿತ್ ದೈಮರಿ, ರಾಮೇಶ್ವರ್ ತೇಲಿ, ಅಶೋಕ್ ಸಿಂಘಾಲ್, ಪಿಜುಶ್ ಹಜಾರಿಕಾ ಮೊದಲಾದ ಹಿರಿಯ ನಾಯಕರು ಹಿಮಂತರ ಹೆಸರನ್ನು ಮುನ್ನಲೆಗೆ ತಂದರು. ಸಭೆಯಲ್ಲಿದ್ದ ಬಹುತೇಕ ಎಲ್ಲಾ ಸದಸ್ಯರೂ ಈ ನಿರ್ಣಯವನ್ನು ಬೆಂಬಲಿಸಿದರು. ಇದರೊಂದಿಗೆ ಹಿಮಂತ ಅವರು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು.