ರಾಯಚೂರು, ಮೇ. 10 (DaijiworldNews/AA): ಕರ್ನಾಟಕದಲ್ಲಿ ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ. ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ. ಪ್ರಧಾನಿ ಮೋದಿಯವರ ಕಣ್ಣಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಲಿಂಗಸಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ಸಿಎಂ ಕುರ್ಚಿ ಅಲುಗಾಡುತ್ತಿದೆ. ಕೇರಳ, ಪಂಜಾಬ್ನಲ್ಲೂ ಇದೇ ರೀತಿ ಆಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ. ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ" ಎಂದು ವಾಗ್ದಾಳಿ ನಡೆಸಿದರು.
ಡಿ.ಸುಧಾಕರ್ ಅವರ ನಿಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಗೆ ಅವರು ನಮ್ಮೊಡನೆ ಇರಬೇಕಿತ್ತು. ಅವರ ಅನಾರೋಗ್ಯದ ಕಾರಣಕ್ಕೆ ಇದು ಸಾಧ್ಯವಾಗಲಿಲ್ಲ. ನನ್ನನ್ನ, ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿದಾಗಲೆಲ್ಲ ಸದಾ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಮನವಿ ಮಾಡುತ್ತಲೇ ಇದ್ದರು. ಅವರು ಜೈನ ಸಮುದಾಯಕ್ಕೆ ಸೇರಿದವರು. ಕಡಿಮೆ ಜನಸಂಖ್ಯೆ ಇದ್ದರು ಸಹ ಎಲ್ಲಾ ಸಮುದಾಯದ ಜನರನ್ನ ಪ್ರೀತಿಯಿಂದ ಕಾಣುತ್ತಿದ್ದರು. ಹೃದಯ ಶ್ರೀಮಂತಿಕೆ ಇದ್ದಂತಹ ಮನುಷ್ಯ. ಇವರ ಸಾವಿನಿಂದ ನಮ್ಮ ಸರ್ಕಾರಕ್ಕೆ, ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ನನಗೆ ವೈಯಕ್ತಿಕವಾಗಿ ಬಹಳ ಆಘಾತವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.