ಬೆಂಗಳೂರು, ಮೇ. 10 (DaijiworldNews/AA): ಎರಡು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ನಡುವೆ ಬ್ಲಾಸ್ಟ್ ಬೆದರಿಕೆ ಜೊತೆಗೆ ಪ್ರಧಾನಿ ಸಂಚರಿಸುವ ಮಾರ್ಗಮಧ್ಯೆ ಸ್ಫೋಟಕ ವಸ್ತುವಾದ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ.

ಪ್ರಧಾನಿ ಮೋದಿ ಭಾಗಿಯಾಗಲಿರುವ ಎರಡೂ ಕಾರ್ಯಕ್ರಮಗಳಲ್ಲಿ ಬ್ಲಾಸ್ಟ್ ಮಾಡುವುದಾಗಿ ಬೆಳಿಗ್ಗೆ 7 ಗಂಟೆ ವೇಳೆಗೆ ಕೋರಮಂಗಲ ಪೊಲೀಸರಿಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 7.30ರ ವೇಳೆಗೆ ಲೋಹಿತ್ ಎಂಬಾತನನ್ನು ಬನ್ನೇರುಘಟ್ಟ ರಸ್ತೆಯ ಮಸೀದಿ ಬಳಿಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಮಾನಸಿಕ ಅಸ್ವಸ್ಥತನ ರೀತಿ ವರ್ತಿಸಿದ್ದಾನೆ. ಇನ್ನು ಈತ ಈ ಹಿಂದೆ ದೇಶದ ಗಣ್ಯ ವ್ಯಕ್ತಿಗಳು ಆಗಮಿಸಿದಾಗಲೂ ಇದೇ ರೀತಿ ಬೆದರಿಕೆ ಕರೆ ಮಾಡಿದ್ದ ಎಂಬುದು ತನಿಖೆ ವೇಖೆ ತಿಳಿದುಬಂದಿದೆ.
ಈ ನಡುವೆ ಬೆಳಿಗ್ಗೆ 10.30ರ ಹೊತ್ತಿಗೆ ಕಗ್ಗಲೀಪುರ ಬಳಿಯ ರವಿಶಂಕರ್ ಗುರೂಜಿ ಆಶ್ರಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ತಾತಗುಣಿ ಸಮೀಪದ ಬ್ರಿಡ್ಜ್ ಪಕ್ಕದ ಕಾಂಪೌಂಡ್ ಬಳಿ ಅನುಮಾನಾಸ್ಪದ ಒಂದು ಕವರ್ ಒಂದು ಪತ್ತೆಯಾಗಿದೆ. ಅದನ್ನು ಪರಿಶೀಲನೆ ನಡೆಸಿದಾಗ ಕಲ್ಲು ಕ್ವಾರಿಗಳಿಗೆ ಬಳಸುವ ಎರಡು ಜಿಲೆಟಿನ್ ಕಡ್ಡಿ ಪತ್ತೆಯಾಗಿದೆ. ತಕ್ಷಣ ಅವನ್ನು ವಶಕ್ಕೆ ಪಡೆದಿರುವ ಪೊಲೀಸರು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಪತ್ತೆಯಾಗಿರುವ ಜಿಲೆಟಿನ್ ಕಡ್ಡಿಗಳು ಸಕ್ರಿಯ ಸ್ಥಿತಿಯಲ್ಲಿ ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಸ್ತುತ ಅನಾಮಧೇಯ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.