ಬೆಂಗಳೂರು, ಮೇ. 10 (DaijiworldNews/AA): ಶ್ರೀ ರವಿಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ಹೆಸರಿನಲ್ಲಿ ಬೀಜ ಬಿತ್ತಿದ್ದರು. ಅದು ಈಗ ದೊಡ್ಡ ಮರವಾಗಿ ಬೆಳೆದಿದೆ. ಬೆಂಗಳೂರು ವಾತಾವರಣ ಅದ್ಭುತವಾಗಿದ್ದು, ಬರೀ ಐಟಿಬಿಟಿ ಮಾತ್ರ ಅಲ್ಲ ಆಧ್ಯಾತ್ಮಿಕತೆಗೂ ಉತ್ತಮ ವಾತಾವರಣ. ನಾನು ವಿದೇಶಕ್ಕೆ ಹೋದಾಗ ಯಾರಾದರೂ ಬೆಂಗಳೂರಿನವರು ಸಿಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಆರ್ಟ್ ಆಫ್ ಲಿವಿಂಗ್ನಲ್ಲಿ ಭವ್ಯ ಧ್ಯಾನ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, "ಆರ್ಟ್ ಆಫ್ ಲಿವಿಂಗ್ನ ಪ್ರತಿಯೊಂದು ಕೆಲಸದಲ್ಲೂ ಸೇವೆ ಅಡಗಿದೆ. ಇಂತಹ ಅನೇಕ ಅನೇಕ ಪರಂಪರೆ, ಸಂಪ್ರದಾಯಗಳು ಭಾರತವನ್ನು ಮತ್ತಷ್ಟು ಮೆರುಗುಗೊಳಿಸುತ್ತಿವೆ. ಇಲ್ಲಿನ ಪ್ರತಿಯೊಬ್ಬ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.
"ಶ್ರೀ ಗುರುದೇವ್ ರವಿಶಂಕರ್ ಗುರೂಜಿ ಅವರ ಹುಟ್ಟು ಹಬ್ಬ ಜೊತೆಗೆ, ಧ್ಯಾನ ಮಂದಿರ ಅನಾವರಣದಿಂದ ತುಂಬಾ ಖುಷಿ ಆಗಿದೆ. ಆರ್ಟ್ ಆಪ್ ಲಿವಿಂಗ್ನ ಸೇವೆಗಳು ಇದೇ ರೀತಿ ಮುಂದುವರೆಯಲಿ. ಭಾರತದಲ್ಲಿ ಅನೇಕ ಪರಂಪರೆ ಸಂಪ್ರದಾಯಗಳಿವೆ. ಸನಾತನ ಧರ್ಮದಲ್ಲಿ ಅನೇಕ ಸಂಪ್ರದಾಯಗಳಿವೆ. ಪ್ರಪಂಚದಲ್ಲಿ ಎಲ್ಲಾ ಕಡೆ ಭಾರತದ ಸಂಸ್ಕೃತಿ ಬಗ್ಗೆ ಚರ್ಚೆ ಆಗುತ್ತಿದೆ. ಈ ನಿಟ್ಟಿನಲ್ಲಿ ಶ್ರೀ ರವಿಶಂಕರ್ ಗುರೂಜಿಯವರು ಆರ್ಟ್ ಆಫ್ ಲಿವಿಂಗ್ ಸ್ಥಾಪಿಸಿದರು. ಈ ಮೂಲಕ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತಿದೆ" ಎಂದು ಅಭಿಪ್ರಾಯಪಟ್ಟರು.
"ವಿಶ್ವದಲ್ಲಿ ತಂತ್ರಜ್ಞಾನ ಮತ್ತು ಆರ್ಥಿಕತೆ ಬದಲಾವಣೆ ಆಗುತ್ತಿದೆ. ಭಾರತ ಬದಲಾವಣೆಯಲ್ಲಿ ಭಾಗಿ ಮಾತ್ರ ಆಗಿಲ್ಲ, ಅದರ ನಾಯಕತ್ವವನ್ನು ವಹಿಸಿದೆ. ಯುವಶಕ್ತಿಯ ಬಗ್ಗೆ ಗಮನ ನೀಡಬೇಕು. ನಮ್ಮ ಬದಲಾವಣೆಗೆ ಕಾರಣ ಯುವಶಕ್ತಿ ಮತ್ತು ಆರ್ಟ್ ಆಫ್ ಲೀವಿಂಗ್ ನಂತಹ ಸಂಸ್ಥೆಗಳೇ ಕಾರಣ. ಯುವ ಶಕ್ತಿಯ ಮನಸ್ಸು ಶಾಂತವಾಗಿ ಇರಬೇಕು. ಸಾಮಾಜಿಕವಾಗಿ ಜವಾಬ್ದಾರಿ ಇರಬೇಕು. ಈ ಧ್ಯಾನ ಕೇಂದ್ರ ಶಾಂತಿ ನೀಡುವ ಕೇಂದ್ರ ಆಗಲಿದೆ" ಎಂದರು
"ಸೇವಾ ಪರಮೋಧರ್ಮ ಆಗಿದೆ. ಭಾರತದ ಹಲವು ಧಾರ್ಮಿಕ ಆಂದೋಲನಗಳು ಮಾನವ ಸೇವೆಯನ್ನು ಪುರಸ್ಕರಿಸಿದೆ. ಯಾವುದೇ ಅಭಿಯಾನಗಳು ಸಫಲವಾಗಲು ಸಮಾಜವನ್ನು ಜಾಗೃತಿ ಮೂಡಿಸುವುದು ಅಗತ್ಯ. ಭಾರತದ ಭೂಮಿಯನ್ನು ರಾಸಾಯನಿಕದಿಂದ ರಕ್ಷಿಸಬೇಕಿದೆ. ನೀರಿನ ರಕ್ಷಣೆ ಮತ್ತು ಉಪಯೋಗ ತಿಳಿಸಬೇಕಾಗಿದೆ. ಜಲಸಂರಕ್ಷಣೆಗೆ ಇದು ಸೂಕ್ತ ಕಾಲ, ಈ ಬಗ್ಗೆ ಗಮನಹರಿಸಬೇಕು" ಎಂದು ಕರೆ ನೀಡಿದರು.