ಚೆನ್ನೈ, ಮೇ. 10 (DaijiworldNews/AA): ರಾಜ್ಯದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡಲು ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಘೋಷಿಸಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತಮ್ಮ ಮೊದಲ ಭಾಷಣದಲ್ಲಿ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನಾನು ಇಂದು ಸುಮಾರು 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲದ ಹೊರೆಯೊಂದಿಗೆ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಸಾರ್ವಜನಿಕರಿಗೆ ರಾಜ್ಯದ ನೈಜ ಸ್ಥಿತಿಯನ್ನು ತಿಳಿಸುವುದು ನನ್ನ ಕರ್ತವ್ಯ. ಇದಕ್ಕಾಗಿ ನಾವು ಶ್ವೇತಪತ್ರವನ್ನು ಬಿಡುಗಡೆ ಮಾಡುತ್ತೇವೆ. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸಗೊಳಿಸುವ ರಾಜಕಾರಣವನ್ನು ತಾನು ಮಾಡುವುದಿಲ್ಲ" ಎಂದು ಹೇಳಿದರು.
"ನಾನು ಪಾರದರ್ಶಕತೆಯಿಂದ ಸರ್ಕಾರವನ್ನು ನಡೆಸುತ್ತೇನೆ. ಪ್ರತಿಯೊಂದು ನಿರ್ಧಾರವೂ ಸಾರ್ವಜನಿಕರಿಗೆ ತಿಳಿಯುವಂತಿರಬೇಕು. ಇದು ಕೇವಲ ನನ್ನ ಸರ್ಕಾರವಲ್ಲ, ಇದು ನಿಮ್ಮ ಸರ್ಕಾರ. ಅಧಿಕಾರ ಎಂಬುದು ಜನಸೇವೆಯ ಜವಾಬ್ದಾರಿ. ಜನರ ಒಂದು ಪೈಸೆಯನ್ನೂ ಮುಟ್ಟಲ್ಲ. ಸರ್ಕಾರದ ವ್ಯವಸ್ಥೆಯನ್ನು ಸರಿದಾರಿಗೆ ತರಲು ಮತ್ತು ಕಾರ್ಯನಿರ್ವಹಿಸಲು ನನಗೆ ಸ್ವಲ್ಪ ಸಮಯ ನೀಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ಸಂಪೂರ್ಣವಾಗಿ ಕೊನೆಗೊಳಿಸುವುದೇ ನಮ್ಮ ಮೊದಲ ಆದ್ಯತೆ" ಎಂದರು.
"ನಾನು ಯಾವುದೇ ರಾಜಮನೆತನದಿಂದ ಬಂದಿಲ್ಲ. ನಾನು ಕೂಡ ಕಷ್ಟವನ್ನು ಅನುಭವಿಸಿದ್ದೇನೆ. ಜನರೇ ನನ್ನನ್ನು ಆರಿಸಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ನಾನು ಮೋಸ ಮಾಡಲ್ಲ" ಎಂದು ಭರವಸೆ ನೀಡಿದರು.
ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಗ್ಯಾರಂಟಿ ಘೋಷಣೆ ಮಾಡಿದ ಅವರು, ಗೃಹ ಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರ ರಕ್ಷಣೆಗಾಗಿ ವಿಶೇಷ ಪಡೆ ರಚಿಸುವುದಾಗಿ ತಿಳಿಸಿದ್ದಾರೆ.