ಬೆಂಗಳೂರು, ಮೇ. 10 (DaijiworldNews/TA): “ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂಬ ಈ ಮಾತು ತಾಯಿಯ ಮಹತ್ವವನ್ನು ಸಾರುತ್ತದೆ. ಜಗತ್ತಿನ ಪ್ರತಿಯೊಂದು ಜೀವಿಗೂ ಆಶ್ರಯ, ಪ್ರೀತಿ, ಮಮತೆ ಮತ್ತು ಬದುಕಿನ ಅರ್ಥ ನೀಡುವ ಮಹಾನ್ ಜೀವ ತಾಯಿ. ನಮ್ಮೆಲ್ಲರ ಬದುಕಿನ ಆಸರೆ, ಆಯಸ್ಸು ಮತ್ತು ಆಧಾರವೇ ಅವಳು.

ಇಂದು ವಿಶ್ವ ತಾಯಂದಿರ ದಿನ. ನಮಗಾಗಿ ತನ್ನ ಬದುಕನ್ನೇ ಮುಡಿಪಾಗಿಡುವ ಆ ತಾಯಿಗೆ ಕೃತಜ್ಞತೆ ಸಲ್ಲಿಸುವ ವಿಶೇಷ ದಿನ. ಆದರೆ ತಾಯಿಯ ಪ್ರೀತಿ, ತ್ಯಾಗ ಮತ್ತು ಮಮಕಾರಕ್ಕೆ ಒಂದು ದಿನ ಸಾಕೇ? ಖಂಡಿತವಾಗಿಯೂ ಸಾಲದು. ಏಕೆಂದರೆ ತಾಯಿಗೆ ಅವಳೇ ಸರಿಸಾಟಿ.
ತಾಯಂದಿರ ದಿನದ ಆರಂಭ ಹೇಗೆ? : ವಿಶ್ವ ತಾಯಂದಿರ ದಿನದ ಆಚರಣೆ 20ನೇ ಶತಮಾನದ ಆರಂಭದಲ್ಲಿ ಅಮೇರಿಕಾದಲ್ಲಿ ಆರಂಭವಾಯಿತು. ಅನ್ನಾ ಜಾರ್ವಿಸ್ ಎಂಬ ಮಹಿಳೆ ತನ್ನ ತಾಯಿಯ ನಿಧನದ ನಂತರ ಮೊದಲ ಬಾರಿಗೆ ತಾಯಂದಿರ ದಿನವನ್ನು ಆಚರಿಸಿದರು.
ನಂತರ 1914ರಲ್ಲಿ ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಅವರು ಮೇ ತಿಂಗಳ ಎರಡನೇ ಭಾನುವಾರವನ್ನು ಅಧಿಕೃತವಾಗಿ ತಾಯಂದಿರ ದಿನವೆಂದು ಘೋಷಿಸಿದರು. ಅಲ್ಲಿಂದ ಪ್ರಾರಂಭವಾದ ಈ ಆಚರಣೆ ಇಂದು ವಿಶ್ವದಾದ್ಯಂತ ಪ್ರೀತಿಯಿಂದ ಆಚರಿಸಲಾಗುತ್ತಿದೆ. ತಾಯಿಯ ಪ್ರೀತಿ ಬೆಲೆ ಕಟ್ಟಲಾಗದ ಅಮೂಲ್ಯ ಭಾವನೆ. ಮಕ್ಕಳಿಗಾಗಿ ತನ್ನ ಕನಸುಗಳನ್ನೇ ಬಲಿಕೊಟ್ಟು ಬದುಕುವ ಆಕೆಯ ತ್ಯಾಗಕ್ಕೆ ಮಿತಿ ಇಲ್ಲ. ಆಗಸದಷ್ಟು ಪ್ರೀತಿ, ಅಳತೆಯಿಲ್ಲದ ಮಮತೆ ಮತ್ತು ದೇವರಷ್ಟು ಕರುಣೆ ಹೊಂದಿರುವ ಜೀವವೇ ತಾಯಿ.
ಪ್ರತಿಯೊಬ್ಬರ ಜೀವನದಲ್ಲೂ ಹೆತ್ತ ತಾಯಿ ಇರಬಹುದು, ಇಲ್ಲದಿರಬಹುದು. ಆದರೆ ತಾಯಿಯಂತೆಯೇ ಕಾಳಜಿ ವಹಿಸುವ ಒಬ್ಬ ಜೀವ ಖಂಡಿತವಾಗಿಯೂ ಇರುತ್ತಾನೆ ಅಥವಾ ಇರುತ್ತಾಳೆ. ಕೆಲವರ ಬದುಕಿನಲ್ಲಿ ತಂದೆಯೇ ತಾಯಿಯ ಪಾತ್ರವನ್ನು ನಿಭಾಯಿಸುತ್ತಾರೆ. ಆ ನಿಸ್ವಾರ್ಥ ಹೃದಯದ ಭಾವನೆಗೆ ಯಾವುದೇ ಹೋಲಿಕೆ ಇಲ್ಲ.
ನಮ್ಮ ದಿನಚರಿಯಲ್ಲಿ, ಅಡುಗೆಯ ರುಚಿಯಲ್ಲಿ, ಮಾತಿನ ಮಮತೆಯಲ್ಲಿ, ಉಸಿರಿನ ಏರಿಳಿತದಲ್ಲೂ ತಾಯಿಯ ಪ್ರೀತಿ ಅಡಗಿದೆ. ಗುರಿಯಿಲ್ಲದ ಬದುಕಿನಲ್ಲಿ ದಾರಿ ತೋರಿಸುವ ಬೆಳಕು ಅವಳು. ನಾವು ಕಾಣುವ ಪ್ರತಿಯೊಂದು ಸಂತೋಷದ ಹಿಂದೆ ಅವಳ ತ್ಯಾಗದ ನೆರಳು ಇರುತ್ತದೆ. ಇಂದು ನಾವು ಕಂಡ ನಲಿವು, ಗೆದ್ದ ಯಶಸ್ಸು, ಬದುಕಿನ ಪ್ರತಿಯೊಂದು ಹೆಜ್ಜೆಯೂ ತಾಯಿಯ ದೊಡ್ಡ ಕಾಣಿಕೆಯೇ ಸರಿ. ಹೆತ್ತು, ಹೊತ್ತು, ಸಾಕಿ ಸಲುಹಿದ ಎಲ್ಲಾ ತಾಯಂದಿರಿಗೂ ಹೃದಯಪೂರ್ವಕ ವಿಶ್ವ ತಾಯಂದಿರ ದಿನದ ಶುಭಾಶಯಗಳು. ತಾಯಿಯ ಪ್ರೀತಿ ಎಂದೆಂದಿಗೂ ಅಮರ.