ಬೆಂಗಳೂರು, ಮೇ. 10 (DaijiworldNews/TA): ನರೇಂದ್ರ ಮೋದಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಇಂದು ಬೆಂಗಳೂರಿಗೆ ಆಗಮಿಸಿದರು.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಘೋಷಣೆ ಕೂಗಿ ಭವ್ಯ ಸ್ವಾಗತ ಕೋರಿದರು. ಕಾರ್ಯಕ್ರಮದ ಸುತ್ತಮುತ್ತ ಕೇಸರಿ ಧ್ವಜಗಳು ಹಾರಾಡುತ್ತಿದ್ದರೆ, ಮೋದಿ ಪರ ಘೋಷಣೆಗಳು ಮೊಳಗಿದವು.
ಯಡಿಯೂರಪ್ಪನವರ ಕೈ ಹಿಡಿದು ಮಾತುಕತೆ : ಈ ವೇಳೆ ಪ್ರಧಾನಿ ಮೋದಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ವಿ. ಎಸ್. ಯಡಿಯೂರಪ್ಪ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದ ಕ್ಷಣ ಗಮನ ಸೆಳೆಯಿತು. ಯಡಿಯೂರಪ್ಪನವರ ಕೈ ಹಿಡಿದು ಕೆಲ ಹೊತ್ತು ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಅವರ ಆರೋಗ್ಯ ವಿಚಾರಿಸಿದರೆಂಬ ಮಾಹಿತಿ ಲಭ್ಯವಾಗಿದೆ. ಈ ದೃಶ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರ ಗಮನ ಸೆಳೆಯಿತು.
ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮ : ಶ್ರೀ ಶ್ರೀ ರವಿಶಂಕರ್ ಗುರೂಜಿಯ 70ನೇ ಜನ್ಮೋತ್ಸವ ಮತ್ತು ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿವೆ. ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.