ಚೆನ್ನೈ, ಮೇ. 10 (DaijiworldNews/TA): ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆದಿದ್ದು, ಇಂದು ಬೆಳಿಗ್ಗೆ 10 ಗಂಟೆಗೆ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳೇ ಪ್ರಭಾವ ಬೀರುತ್ತಿದ್ದವು. ಆದರೆ ಈ ಬಾರಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಸಾಧನೆ ಮಾಡಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ.
ಕಾಂಗ್ರೆಸ್, ಸಿಪಿಐ ಹಾಗೂ ಸಿಪಿಐ(ಎಂ) ಸೇರಿದಂತೆ ಹಲವು ಪಕ್ಷಗಳ ಬೆಂಬಲದೊಂದಿಗೆ 120 ಶಾಸಕರ ಬೆಂಬಲ ಪಡೆದಿರುವ ವಿಜಯ್, 1967ರ ನಂತರ ಡಿಎಂಕೆ ಮತ್ತು ಎಐಎಡಿಎಂಕೆ ಹೊರತಾಗಿ ಅಧಿಕಾರಕ್ಕೆ ಬಂದ ಮೊದಲ ನಾಯಕ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಚಿತ್ರರಂಗದ ಸೂಪರ್ಸ್ಟಾರ್ ಆಗಿದ್ದ ವಿಜಯ್ ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಸಂಭ್ರಮಕ್ಕೆ ಕಾರಣವಾಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನಾದ್ಯಂತ ವಿಜಯ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಸಾವಿರಾರು ಅಭಿಮಾನಿಗಳು ಚೆನ್ನೈಗೆ ಆಗಮಿಸಿ ಪ್ರಮಾಣವಚನ ಸಮಾರಂಭವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ವಿಜಯ್, ಕೆಲ ವರ್ಷಗಳ ಹಿಂದೆ ಟಿವಿಕೆ ಪಕ್ಷವನ್ನು ಸ್ಥಾಪಿಸಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿದ್ದರು. ಜನಪರ ಭರವಸೆಗಳು, ಯುವಕರನ್ನು ಸೆಳೆಯುವ ನಾಯಕತ್ವ ಮತ್ತು ಬದಲಾವಣೆಯ ಘೋಷಣೆಗಳ ಮೂಲಕ ಅವರು ಜನರ ವಿಶ್ವಾಸ ಗೆದ್ದಿದ್ದಾರೆ.
ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ವಿಜಯ್ ಅವರ ಆಡಳಿತ ತಮಿಳುನಾಡಿನ ರಾಜಕೀಯದಲ್ಲಿ ಹೊಸ ದಿಕ್ಕು ತೋರಿಸಬಹುದೇ ಎಂಬ ಕುತೂಹಲ ಹೆಚ್ಚಿದೆ.