ಚಿತ್ರದುರ್ಗ,ಮೇ. 10 (DaijiworldNews/TA): ಸಚಿವ ಡಿ. ಸುಧಾಕರ್ ಅವರು ಇಂದು ಮುಂಜಾನೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 65 ವರ್ಷದ ಸುಧಾಕರ್ ಅವರು ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 3:15ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಮೊದಲಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ಡಿ. ಸುಧಾಕರ್ ಅವರಿಗೆ ನಂತರ ಶ್ವಾಸಕೋಶ ಸೋಂಕು ಕಾಣಿಸಿಕೊಂಡಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕಳೆದ ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ನಿಧನರಾದರು.
1961ರ ಮಾರ್ಚ್ 28ರಂದು ಎನ್. ದಶರಥಯ್ಯ ಮತ್ತು ಕಾಂಚನಮಾಲಮ್ಮ ದಂಪತಿಯ ಪುತ್ರನಾಗಿ ಜನಿಸಿದ ಡಿ. ಸುಧಾಕರ್ ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು. ಬಳಿಕ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದರು.
ಕುಟುಂಬದ ಕೃಷಿ ಮತ್ತು ಲಿಕ್ಕರ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅವರು ನಂತರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಮಾಜಿ ಶಾಸಕ ಎನ್. ಜಯಣ್ಣ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಪಯಣ ಆರಂಭಿಸಿದ ಸುಧಾಕರ್ ಅವರು ಹಂತ ಹಂತವಾಗಿ ಬೆಳೆದು ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದರು.
2004ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಅವರು, ಬಳಿಕ ಹಿರಿಯೂರು ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ ಸಕ್ರಿಯರಾಗಿದ್ದರು.
ರಾಜಕೀಯದಲ್ಲಿದ್ದರೂ ಸರಳ ಜೀವನಶೈಲಿಯಿಂದ ಗುರುತಿಸಿಕೊಂಡಿದ್ದ ಡಿ. ಸುಧಾಕರ್ ಅವರು ರೈತಪರ ಕಾಳಜಿಯಿಂದ ಜನಮನ ಗೆದ್ದಿದ್ದರು. ಬರಗಾಲದ ಸಮಯದಲ್ಲಿ ರೈತರ ನೆರವಿಗೆ ಧಾವಿಸಿ ಮೇವು ಹಂಚಿದ ಅವರ ಸೇವಾಭಾವನೆ ಜಿಲ್ಲೆಯ ಜನರಲ್ಲಿ ಇನ್ನೂ ನೆನಪಾಗಿದೆ.
ಪತ್ನಿ ಹರ್ಷಿಣಿ, ಪುತ್ರ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಸೇರಿದಂತೆ ಅಪಾರ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಅಗಲಿರುವ ಸುಧಾಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಡಿ. ಸುಧಾಕರ್ ಅವರ ಹೆಸರು ಸದಾ ನೆನಪಿನಲ್ಲಿ ಉಳಿಯಲಿದೆ.