ಬೆಳಗಾವಿ, ಮೇ. 10 (DaijiworldNews/TA): ಯುಪಿಎಸ್ಸಿ ಪರೀಕ್ಷೆ ಎಂದರೆ ಲಕ್ಷಾಂತರ ಯುವಕರ ಕನಸು. ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಮತ್ತು ಅಪಾರ ತಾಳ್ಮೆ ಬೇಡುವ ಈ ಪರೀಕ್ಷೆಯಲ್ಲಿ ಸಾಧನೆ ಮಾಡಲು ಹಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಚಿಂಗ್ ಪಡೆಯುತ್ತಾರೆ. ಆದರೆ ಯಾವುದೇ ಕೋಚಿಂಗ್ ಇಲ್ಲದೇ, ಗ್ರಾಮೀಣ ಹಿನ್ನೆಲೆಯ ರೈತನೊಬ್ಬರ ಮಗ ಇದೀಗ ದೇಶಕ್ಕೇ ಟಾಪರ್ ಆಗಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾನೆ.

ಬಸವರಾಜ್ ದರೇಪ್ಪ ಕೆಂಪವಾಡ ಅವರು ಯುಪಿಎಸ್ಸಿ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) 2025ರ ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ರ್ಯಾಂಕ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಅಥಣಿಯ ಸವದಿ ಗ್ರಾಮದ ಯುವಕನ ಸಾಧನೆ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಬಸವರಾಜ್, ಸಾಮಾನ್ಯ ಸೌಲಭ್ಯಗಳ ನಡುವೆಯೇ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದ್ದರು. ತಂದೆ ದರೇಪ್ಪ ಕೆಂಪವಾಡ ಕೃಷಿಕರಾಗಿದ್ದು, ಗ್ರಾಮೀಣ ಪರಿಸರದಲ್ಲೇ ಬಸವರಾಜ್ ತಮ್ಮ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದರು. ನಂತರ ಅಥಣಿಯಲ್ಲಿ ಮುಂದಿನ ವ್ಯಾಸಂಗ ಮಾಡಿ, ಶಿರಸಿಯ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ ಅವರು, ದೊಡ್ಡ ಕನಸಿನೊಂದಿಗೆ ಬೆಂಗಳೂರಿಗೆ ಬಂದು UPSC ತಯಾರಿ ಆರಂಭಿಸಿದರು.
ಮೊದಲ ಪ್ರಯತ್ನ ವಿಫಲ, ಎರಡನೇ ಪ್ರಯತ್ನದಲ್ಲಿ ದೇಶಕ್ಕೇ ನಂಬರ್ 1 : UPSC ಪ್ರಯಾಣದ ಮೊದಲ ಪ್ರಯತ್ನ ಬಸವರಾಜ್ಗೆ ಯಶಸ್ಸು ತಂದುಕೊಡಲಿಲ್ಲ. ಆದರೆ ವೈಫಲ್ಯದಿಂದ ಹಿಂಜರಿಯದೇ, ಅದನ್ನೇ ಪಾಠವನ್ನಾಗಿ ಮಾಡಿಕೊಂಡ ಅವರು ಎರಡನೇ ಪ್ರಯತ್ನದಲ್ಲಿ ಇಡೀ ದೇಶಕ್ಕೇ ಟಾಪರ್ ಆಗಿದ್ದಾರೆ. ಯಾವುದೇ ವಿಶೇಷ ಕೋಚಿಂಗ್ ಅಥವಾ ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ನೆರವಿಲ್ಲದೇ ಈ ಸಾಧನೆ ಮಾಡಿರುವುದು ಇನ್ನಷ್ಟು ವಿಶೇಷವಾಗಿಸಿದೆ.
UPSC IFS 2025ರ ಪರೀಕ್ಷೆಯ ಪ್ರಿಲಿಮ್ಸ್ 2025ರಲ್ಲಿ ನಡೆದಿದ್ದು, ಮುಖ್ಯ ಪರೀಕ್ಷೆ ನವೆಂಬರ್ 16ರಿಂದ 23ರವರೆಗೆ ನಡೆಯಿತು. ಬಳಿಕ ಏಪ್ರಿಲ್ 6ರಿಂದ 15, 2026ರವರೆಗೆ ಪರ್ಸನಾಲಿಟಿ ಟೆಸ್ಟ್ ಹಾಗೂ ಸಂದರ್ಶನ ಪ್ರಕ್ರಿಯೆ ನಡೆದಿತ್ತು. ಒಟ್ಟು 150 ಹುದ್ದೆಗಳಿಗೆ 148 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಬಸವರಾಜ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಸವದಿ ಗ್ರಾಮದಲ್ಲಿ ಸಂಭ್ರಮ : ಬಸವರಾಜ್ ಟಾಪರ್ ಆದ ಸುದ್ದಿ ತಿಳಿದ ತಕ್ಷಣ ಸವದಿ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜಕೀಯ ನಾಯಕರು, ಗಣ್ಯರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಇರುವ ಬಸವರಾಜ್ ಶೀಘ್ರದಲ್ಲೇ ತಮ್ಮ ಹುಟ್ಟೂರಿಗೆ ಭೇಟಿ ನೀಡಲಿದ್ದಾರೆ.