ಚಿತ್ರದುರ್ಗ, ಮೇ. 09 (DaijiworldNews/TA): ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣ ಹಾಗೂ ಜನಸೇವೆಯನ್ನು ಗೌರವಿಸಲು ಆಯೋಜಿಸಲಾಗಿದ್ದ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ನೆರವೇರಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೋಲ್ಕತ್ತಾದಿಂದ ನೇರವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಬಿಜೆಪಿ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು. ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜನರು ಹರ್ಷೋದ್ಘಾರ ಕೂಗಿ ಸ್ವಾಗತಿಸಿದರು. ಬಳಿಕ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಅಭಿನಂದಿಸಿದರು. ಈ ವೇಳೆ ಇಬ್ಬರು ನಾಯಕರು ಕೈ ಮೇಲೆತ್ತಿ ಒಗ್ಗಟ್ಟಿನ ಸಂದೇಶ ನೀಡಿದರು.
ನಂತರ ದೀಪ ಬೆಳಗುವ ಮೂಲಕ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಅಮಿತ್ ಶಾ ಅಧಿಕೃತ ಚಾಲನೆ ನೀಡಿದರು. ವಿವಿಧ ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವಾದ ನೀಡಿದರು. ಬಳಿಕ ಯಡಿಯೂರಪ್ಪ ಅವರು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಮಾರಂಭದಲ್ಲಿ ಯಡಿಯೂರಪ್ಪ ಅವರ ರಾಜಕೀಯ ಜೀವನ ಮತ್ತು ಸಾರ್ವಜನಿಕ ಸೇವೆಯನ್ನು ಒಳಗೊಂಡ ಎರಡು ವಿಶೇಷ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಸನ್ಮಾನ ಸ್ವೀಕರಿಸಲು ಕುರ್ಚಿ ಬೇಡ ಎಂದು ಯಡಿಯೂರಪ್ಪ ಹೇಳಿದ್ದರೂ, ಅಮಿತ್ ಶಾ ಅವರು ಕೈಹಿಡಿದು ಕರೆತಂದು ಕುರ್ಚಿಯಲ್ಲಿ ಕೂರಿಸಿದರು. ಬಳಿಕ ಪೇಟ ತೊಡಿಸಿ, ಶಾಲು ಹೊದಿಸಿ ಹಾಗೂ ಹಾರ ಹಾಕಿ ಯಡಿಯೂರಪ್ಪ ಅವರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ, ಸುತ್ತೂರು ಶ್ರೀ, ನಿರಂಜನಾಪುರಿ ಸ್ವಾಮೀಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿದ್ದರು.
ಇದೇ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್, ಸುಧಾಕರ್ ರೆಡ್ಡಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ವಿಪಕ್ಷ ನಾಯಕ ಆರ್.ಅಶೋಕ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.