ಚೆನ್ನೈ, ಮೇ. 09 (DaijiworldNews/TA): ತಮಿಳುನಾಡಿನ ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ಮುಂದುವರಿದಿದ್ದ ಸರ್ಕಾರ ರಚನೆಯ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಂತಾಗಿದೆ. ನಟ ಹಾಗೂ ಟಿವಿಕೆ ನಾಯಕ ವಿಜಯ್ ನೇತೃತ್ವದ ಪಕ್ಷಕ್ಕೆ ಇದೀಗ ಬಹುಮತ ಬೆಂಬಲ ದೊರೆತಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ.

ವಿಸಿಕೆ ನಾಯಕ ತಿರುಮಾವಲವನ್ ಅವರು ಟಿವಿಕೆಗೆ ಅಧಿಕೃತ ಬೆಂಬಲ ಪತ್ರ ನೀಡಿರುವುದಾಗಿ ತಿಳಿದುಬಂದಿದೆ. ಇದೇ ವೇಳೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಬೇಷರತ್ ಬೆಂಬಲ ಘೋಷಿಸಿದೆ. ಇದರೊಂದಿಗೆ ವಿಜಯ್ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ.
ಇಂದು ಬೆಳಗ್ಗಿನಿಂದಲೇ ಟಿವಿಕೆ ಮತ್ತು ವಿಸಿಕೆ ನಾಯಕರು ಪ್ರತ್ಯೇಕವಾಗಿ ತಮ್ಮ ಶಾಸಕರೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಸಭೆಗಳ ಬಳಿಕ ಬೆಂಬಲ ಘೋಷಣೆ ಹೊರಬಿದ್ದಿದ್ದು, ಸಂಜೆ 6 ಗಂಟೆಗೆ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.
ಈ ಕುರಿತು ಟಿವಿಕೆ ನಾಯಕ ಅಧವ್ ಅರ್ಜುನ ಪ್ರತಿಕ್ರಿಯೆ ನೀಡಿದ್ದು, ವಿಸಿಕೆ ಪಕ್ಷವು ವಿಜಯ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಸರ್ಕಾರ ರಚನೆಗೆ ಬೆಂಬಲ ನೀಡಿದ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದ್ರಾವಿಡ ಮುನ್ನೇಟ್ರ ಕಳಗಂ 59 ಸ್ಥಾನಗಳನ್ನು ಗೆದ್ದಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ 47 ಸ್ಥಾನಗಳನ್ನು ಪಡೆದುಕೊಂಡಿದೆ. ಪಿಎಂಕೆ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದ್ದು, ಐಯುಎಂಎಲ್, ಸಿಪಿಐ ಮತ್ತು ಸಿಪಿಐ(ಎಂ) ತಲಾ ಎರಡು ಸ್ಥಾನಗಳನ್ನು ಪಡೆದಿವೆ. ಬಿಜೆಪಿ, ಡಿಎಂಡಿಕೆ ಮತ್ತು ಎಎಂಕೆ ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿವೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಟಿವಿಕೆಗೆ ಬೆಂಬಲ ಘೋಷಿಸಿತ್ತು. ಇದೀಗ ಸಿಪಿಐ, ಸಿಪಿಐ(ಎಂ), ವಿಸಿಕೆ ಹಾಗೂ ಮುಸ್ಲಿಂ ಲೀಗ್ ಕೂಡ ವಿಜಯ್ ಪರ ನಿಂತಿರುವುದರಿಂದ ಸರ್ಕಾರ ರಚನೆಗೆ ಅಗತ್ಯ ಬಹುಮತ ಟಿವಿಕೆಗೆ ಸಿಕ್ಕಂತಾಗಿದೆ.
ಇನ್ನೊಂದೆಡೆ, ಬೆಂಬಲ ಘೋಷಣೆಯ ಸುದ್ದಿ ಹೊರಬಿದ್ದ ತಕ್ಷಣ ರಾಜ್ಯದ ಹಲವೆಡೆ ಟಿವಿಕೆ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ವಿಜಯ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.