ನವದೆಹಲಿ, ಮೇ. 09 (DaijiworldNews/TA): ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹತ್ವದ ನಾಯಕತ್ವ ಬದಲಾವಣೆ ನಡೆದಿದೆ. ಕೇಂದ್ರ ಸರ್ಕಾರವು ಹೊಸ ರಕ್ಷಣಾ ಮುಖ್ಯಸ್ಥ ಹಾಗೂ ನೌಕಾಪಡೆ ಮುಖ್ಯಸ್ಥರನ್ನು ನೇಮಕ ಮಾಡಿದೆ.

ಎನ್. ಎಸ್. ರಾಜಾ ಸುಬ್ರಮಣಿ ಅವರನ್ನು ಹೊಸ ರಕ್ಷಣಾ ಮುಖ್ಯಸ್ಥರಾಗಿ ನೇಮಿಸಲಾಗಿದ್ದು, ಪ್ರಸ್ತುತ ಮುಖ್ಯಸ್ಥ ಅನಿಲ್ ಚೌಹಾಣ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚೌಹಾಣ್ ಅವರ ಅವಧಿ ಮೇ 30ರಂದು ಅಂತ್ಯಗೊಳ್ಳಲಿದೆ.
ಇದೇ ವೇಳೆ, ಕೃಷ್ಣ ಸ್ವಾಮಿನಾಥನ್ ಅವರನ್ನು ಭಾರತೀಯ ನೌಕಾಪಡೆಯ ಹೊಸ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ನೌಕಾಪಡೆ ಮುಖ್ಯಸ್ಥ ದಿನೇಶ್ ಕುಮಾರ್ ತ್ರಿಪಾಠಿ ಅವರ ಅಧಿಕಾರಾವಧಿ ಮೇ 31ರಂದು ಮುಕ್ತಾಯಗೊಳ್ಳಲಿದೆ.
ಯಾರು ಈ ರಾಜಾ ಸುಬ್ರಹ್ಮಣ್ಯಂ? : ಲೆಫ್ಟಿನೆಂಟ್ ಜನರಲ್ ಎಸ್.ಎಸ್. ರಾಜಾ ಸುಬ್ರಹ್ಮಣ್ಯಂ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ತಮ್ಮ ಸೇನಾ ಸೇವೆ ಆರಂಭಿಸಿದ್ದರು. 1985ರಲ್ಲಿ ಗರ್ವಾಲ್ ರೈಫಲ್ಸ್ಗೆ ನಿಯೋಜನೆಗೊಂಡ ಅವರು, ಮೂರು ದಶಕಗಳಿಗಿಂತ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಯುಕೆಯ ಜಂಟಿ ಸೇವೆಗಳ ಕಮಾಂಡ್ ಮತ್ತು ಸ್ಟಾಫ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಅವರು, ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲೂ ಅಧ್ಯಯನ ಮಾಡಿದ್ದಾರೆ. ಲಂಡನ್ನ ಕಿಂಗ್ಸ್ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದಿಂದ ರಕ್ಷಣಾ ಅಧ್ಯಯನದಲ್ಲಿ ಎಂಫಿಲ್ ಪದವಿ ಪಡೆದಿದ್ದಾರೆ.
ಕಝಾಕಿಸ್ತಾನದ ಅಸ್ತಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ರಕ್ಷಣಾ ಅಟ್ಯಾಚೆಯಾಗಿಯೂ ಸೇವೆ ಸಲ್ಲಿಸಿದ್ದ ಅವರು, ಜಮ್ಮು-ಕಾಶ್ಮೀರದ ರಾಷ್ಟ್ರೀಯ ರೈಫಲ್ಸ್ ವಲಯದ ಉಪ ಕಮಾಂಡರ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಹಲವು ಗೌರವಗಳಿಗೆ ಭಾಜನ : ಸೇನೆ ಸೇವೆಯ ಅವಧಿಯಲ್ಲಿ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ.
2023ರಲ್ಲಿ ಸೆಂಟ್ರಲ್ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ನೇಮಕಗೊಂಡಿದ್ದ ಅವರು, ಬಳಿಕ ಭಾರತದ 47ನೇ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದರು.
ನೌಕಾಪಡೆ ಮುಖ್ಯಸ್ಥರಾಗಿ ಕೃಷ್ಣ ಸ್ವಾಮಿನಾಥನ್ : 1987ರಲ್ಲಿ ಭಾರತೀಯ ನೌಕಾಪಡೆಯಲ್ಲಿ ಸೇವೆ ಆರಂಭಿಸಿದ್ದ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರಿದಂತೆ ಯುಕೆಯ ಮತ್ತು ಅಮೆರಿಕದ ಪ್ರಮುಖ ಸೈನಿಕ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ.
ಅವರು ಐಎನ್ಎಸ್ ವಿದ್ಯುತ್, ಐಎನ್ಎಸ್ ಕುಲಿಶ್, ಐಎನ್ಎಸ್ ಮೈಸೂರು ಹಾಗೂ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಸೇರಿದಂತೆ ಹಲವು ಪ್ರಮುಖ ಯುದ್ಧನೌಕೆಗಳ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ನೌಕಾ ಕಮಾಂಡ್ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾಮಿನಾಥನ್ ಇದೀಗ ದೇಶದ ನೂತನ ನೌಕಾಪಡೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.