ನವದೆಹಲಿ, ಮೇ. 09 (DaijiworldNews/TA): ಸತ್ನಾ ಸೆಂಟ್ರಲ್ ಜೈಲಿನಲ್ಲಿ ಆರಂಭವಾದ ಪರಿಚಯವೇ ಕೊನೆಗೆ ಪ್ರೀತಿಯಾಗಿ, ಇದೀಗ ಅಂತರ್ಧರ್ಮೀಯ ಮದುವೆಯಾಗಿ ಸುದ್ದಿಯಾಗಿದೆ. ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಕೈದಿಯನ್ನು, ಅದೇ ಜೈಲಿನ ಮಹಿಳಾ ಅಧಿಕಾರಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಹಿಳಾ ಜೈಲಧಿಕಾರಿ ಫಿರೋಜಾ ಖಾತೂನ್ ಹಾಗೂ ಮಾಜಿ ಕೈದಿ ಧರ್ಮೇಂದ್ರ ಸಿಂಗ್ ಅವರ ವಿವಾಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸತ್ನಾ ಸೆಂಟ್ರಲ್ ಜೈಲಿನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಮತ್ತು ವಾರಂಟ್ ಇನ್ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಫಿರೋಜಾ ಖಾಟೂನ್ ಅವರು, ಜೈಲಿನಲ್ಲಿದ್ದ ಧರ್ಮೇಂದ್ರ ಸಿಂಗ್ ಅವರನ್ನು ಮೊದಲು ಭೇಟಿಯಾಗಿದ್ದರು.
2007ರಲ್ಲಿ ಚಾಂದಲಾ ನಗರ ಪರಿಷತ್ತಿನ ಉಪಾಧ್ಯಕ್ಷ ಕೃಷ್ಣ ದತ್ತ ದೀಕ್ಷಿತ್ ಅವರ ಕೊಲೆ ಪ್ರಕರಣದಲ್ಲಿ ಧರ್ಮೇಂದ್ರ ಸಿಂಗ್ ಶಿಕ್ಷೆಗೆ ಗುರಿಯಾಗಿದ್ದರು. ಸುಮಾರು 14 ವರ್ಷಗಳ ಕಾಲ ಜೈಲಿನಲ್ಲಿ ಇದ್ದ ಅವರು, ಉತ್ತಮ ನಡವಳಿಕೆಯಿಂದ ಬಳಿಕ ಕ್ಲೆರಿಕಲ್ ಕರ್ತವ್ಯಕ್ಕೂ ನಿಯೋಜಿಸಲ್ಪಟ್ಟಿದ್ದರು. ಈ ಅವಧಿಯಲ್ಲೇ ಇಬ್ಬರ ನಡುವೆ ಆತ್ಮೀಯತೆ ಬೆಳೆದು ನಂತರ ಪ್ರೀತಿಗೆ ತಿರುಗಿದೆ ಎನ್ನಲಾಗಿದೆ.
ಉತ್ತಮ ನಡವಳಿಕೆಯ ಆಧಾರದ ಮೇಲೆ ಸುಮಾರು ನಾಲ್ಕು ವರ್ಷಗಳ ಹಿಂದೆ ಧರ್ಮೇಂದ್ರ ಸಿಂಗ್ ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಬಳಿಕವೂ ಇಬ್ಬರೂ ಸಂಪರ್ಕದಲ್ಲಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಫಿರೋಜಾ ಖಾಟೂನ್ ಅವರ ಕುಟುಂಬ ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಕುಟುಂಬದವರು ವಿವಾಹ ಸಮಾರಂಭಕ್ಕೂ ಹಾಜರಾಗಲಿಲ್ಲ ಎನ್ನಲಾಗಿದೆ.
ಮೇ 5ರಂದು ಛತರ್ಪುರ ಜಿಲ್ಲೆಯ ಲವ್ಕುಶ್ನಗರ ಪ್ರದೇಶದಲ್ಲಿ ಈ ವಿವಾಹ ನೆರವೇರಿದೆ. ಧರ್ಮೇಂದ್ರ ಸಿಂಗ್ ಅವರ ಕುಟುಂಬ ಸಂಪ್ರದಾಯದಂತೆ ಹಿಂದೂ ವಿಧಿವಿಧಾನಗಳಲ್ಲಿ ಮದುವೆ ನಡೆದಿದ್ದು, ಈ ಅಂತರ್ಧರ್ಮೀಯ ವಿವಾಹ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.