ಕೋಲ್ಕತ್ತಾ, ಮೇ. 09 (DaijiworldNews/TA): ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾದ ಕ್ಷಣಕ್ಕೆ ಸಾಕ್ಷಿಯಾದ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ನಡೆ ದೇಶದ ಗಮನ ಸೆಳೆದಿದೆ.

ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅಧಿಕಾರ ಸ್ವೀಕರಿಸಿದ ವೇಳೆ, ಪ್ರಧಾನಿ ಮೋದಿ ಅವರು 98 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತ ಮಖನ್ಲಾಲ್ ಸರ್ಕಾರ್ ಅವರ ಪಾದಮುಟ್ಟಿ ನಮಸ್ಕರಿಸಿದರು.
ಶಾಲು ಹೊದಿಸಿ ಗೌರವಿಸಿದ ಮೋದಿ ಅವರು, ಮಖನ್ಲಾಲ್ ಸರ್ಕಾರ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಶುಭಾಶಯ ಕೋರಿದರು. ಈ ದೃಶ್ಯ ಸಮಾರಂಭದಲ್ಲಿ ಭಾಗವಹಿಸಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.
ಮಖನ್ಲಾಲ್ ಸರ್ಕಾರ್ ಯಾರು? : ಮಖನ್ಲಾಲ್ ಸರ್ಕಾರ್ ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಷ್ಟ್ರೀಯವಾದಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಆರಂಭಿಕ ಕಾರ್ಯಕರ್ತರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. 1952ರಲ್ಲಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಜನಸಂಘ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಭಾಗವಹಿಸಿದ್ದ ಅವರು, ಆ ಸಂದರ್ಭದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.
ಬಿಜೆಪಿಯ ಸಂಘಟನೆಯಲ್ಲಿ ಮಹತ್ವದ ಪಾತ್ರ: 1980ರಲ್ಲಿ ಬಿಜೆಪಿ ಸ್ಥಾಪನೆಯಾದ ನಂತರ, ಮಖನ್ಲಾಲ್ ಸರ್ಕಾರ್ ಅವರನ್ನು ಪಶ್ಚಿಮ ದಿನಾಜ್ಪುರ, ಜಲ್ಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳ ಸಂಘಟನಾ ಸಂಯೋಜಕರಾಗಿ ನೇಮಕ ಮಾಡಲಾಗಿತ್ತು. ಕೇವಲ ಒಂದು ವರ್ಷದೊಳಗೆ ಸುಮಾರು 10,000 ಹೊಸ ಸದಸ್ಯರನ್ನು ಪಕ್ಷಕ್ಕೆ ಸೇರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.
1981ರಿಂದ ನಿರಂತರ ಏಳು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಆ ಕಾಲಘಟ್ಟದಲ್ಲಿ ಅದನ್ನು ಅಪರೂಪದ ಸಾಧನೆ ಎಂದು ಪರಿಗಣಿಸಲಾಗಿತ್ತು. ಏಕೆಂದರೆ ಬಿಜೆಪಿ ಸಂಘಟನೆಯಲ್ಲಿ ಸಾಮಾನ್ಯವಾಗಿ ನಾಯಕರು ದೀರ್ಘಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯುವುದು ಅಪರೂಪವಾಗಿತ್ತು.
ರಾಜಕೀಯ ವೇದಿಕೆಯಲ್ಲಿ ಹಿರಿಯ ಕಾರ್ಯಕರ್ತನಿಗೆ ಪ್ರಧಾನಿ ಮೋದಿ ತೋರಿದ ಗೌರವದ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. “ಸಂಘಟನೆಯ ಅಡಿಪಾಯ ಹಾಕಿದವರನ್ನು ಮರೆಯದ ನಾಯಕತ್ವ” ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.