ಬೆಂಗಳೂರು,ಮೇ. 09 (DaijiworldNews/TA): ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ರೈಲ್ವೆ ಸಂಪರ್ಕ ಮತ್ತು ಸಾರಿಗೆ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಸಚಿವ ಸಂಪುಟವು ಮೂರು ಪ್ರಮುಖ ಮಲ್ಟಿ-ಟ್ರ್ಯಾಕಿಂಗ್ ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ ರೂ. 23,437 ಕೋಟಿ ಆಗಿದ್ದು, 2030-31ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ. ಯೋಜನೆಗಳು ಪೂರ್ಣಗೊಂಡ ನಂತರ ಭಾರತೀಯ ರೈಲ್ವೆ ಜಾಲಕ್ಕೆ ಸುಮಾರು 901 ಕಿಲೋಮೀಟರ್ ಹೊಸ ಹಳಿ ಸೇರ್ಪಡೆಯಾಗಲಿದೆ.
ಯಾವ ಯಾವ ಯೋಜನೆಗಳಿಗೆ ಅನುಮೋದನೆ?
ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಪ್ರಮುಖ ಯೋಜನೆಗಳು:
* ನಾಗ್ಡಾ – ಮಥುರಾ 3ನೇ ಮತ್ತು 4ನೇ ರೈಲು ಹಳಿ
* ಗುಂತಕಲ್ – ವಾಡಿ 3ನೇ ಮತ್ತು 4ನೇ ರೈಲು ಹಳಿ
* ಬುರ್ಹ್ವಾಲ್ – ಸೀತಾಪುರ 3ನೇ ಮತ್ತು 4ನೇ ರೈಲು ಹಳಿ
ಈ ಯೋಜನೆಗಳು ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 19 ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಾರಿಯಾಗಲಿವೆ.
ಗುಂತಕಲ್–ವಾಡಿ ಮಾರ್ಗಕ್ಕೆ ವಿಶೇಷ ಮಹತ್ವ: ಕರ್ನಾಟಕದ ಸಂಪರ್ಕ ವ್ಯವಸ್ಥೆಗೆ ಅತ್ಯಂತ ಪ್ರಮುಖವಾದ ಗುಂತಕಲ್–ವಾಡಿ ರೈಲ್ವೆ ಮಾರ್ಗವು ದಕ್ಷಿಣ ಭಾರತವನ್ನು ಮಧ್ಯ ಮತ್ತು ಪಶ್ಚಿಮ ಭಾರತದೊಂದಿಗೆ ಸಂಪರ್ಕಿಸುವ ಪ್ರಮುಖ ವಿದ್ಯುದ್ದೀಕೃತ ದ್ವಿಪಥ ಮಾರ್ಗವಾಗಿದೆ. ಸುಮಾರು 230 ಕಿ.ಮೀ ಉದ್ದದ ಈ ಮಾರ್ಗವು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಾದುಹೋಗುತ್ತದೆ.
ಗುಂತಕಲ್, ಗೂಟಿ, ಡೋನ್ ಮತ್ತು ವಾಡಿ ಪ್ರಮುಖ ಜಂಕ್ಷನ್ಗಳಾಗಿದ್ದು, ವಾಡಿ ಜಂಕ್ಷನ್ ಮೂಲಕ ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ನಗರಗಳಿಗೆ ಸಂಪರ್ಕ ಲಭ್ಯವಿದೆ. ಆದೋನಿ, ರಾಯಚೂರು, ಮಂತ್ರಾಲಯಂ ರಸ್ತೆ ಮತ್ತು ಯಾದಗಿರಿ ಈ ಮಾರ್ಗದ ಪ್ರಮುಖ ನಿಲ್ದಾಣಗಳಾಗಿವೆ.
ಸರಕು ಮತ್ತು ಪ್ರಯಾಣಿಕರ ಸಂಚಾರಕ್ಕೆ ವೇಗ : ಗಣಿಗಾರಿಕೆ ಪ್ರದೇಶಗಳಿಂದ ಹೆಚ್ಚುತ್ತಿರುವ ಸರಕು ಸಾಗಣೆ ಹಾಗೂ ಪ್ರಯಾಣಿಕರ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಈ ಮಾರ್ಗದಲ್ಲಿ 3ನೇ ಮತ್ತು 4ನೇ ಹಳಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ರೈಲುಗಳ ಸಂಚಾರ ವೇಗ ಹೆಚ್ಚುವುದರ ಜೊತೆಗೆ ದಟ್ಟಣೆ ಕೂಡ ಕಡಿಮೆಯಾಗಲಿದೆ. ಇದರಿಂದ ಸರಕು ಸಾಗಣೆ ವ್ಯವಸ್ಥೆ ಸುಧಾರಿಸಿ, ಕೈಗಾರಿಕೆ ಹಾಗೂ ವ್ಯಾಪಾರ ವಲಯಕ್ಕೂ ಲಾಭವಾಗುವ ನಿರೀಕ್ಷೆಯಿದೆ.
ಪ್ರಸ್ತಾವಿತ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯಿಂದ ಸುಮಾರು 83 ಲಕ್ಷ ಜನಸಂಖ್ಯೆ ಹೊಂದಿರುವ 4,161 ಹಳ್ಳಿಗಳಿಗೆ ಉತ್ತಮ ರೈಲ್ವೆ ಸಂಪರ್ಕ ಸಿಗಲಿದೆ. ಗ್ರಾಮೀಣ ಭಾಗದ ಜನರಿಗೆ ಸುಲಭ ಸಾರಿಗೆ ಸೌಲಭ್ಯ ದೊರೆಯಲಿದ್ದು, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ದಕ್ಷಿಣ ಹಾಗೂ ಉತ್ತರ ಭಾರತದ ನಡುವಿನ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.