ಬೀದರ್, ಮೇ. 09 (DaijiworldNews/AA): ಬೀದಿ ನಾಯಿ ದಾಳಿಗೆ 5 ತಿಂಗಳ ಹಸುಗೂಸು ಸಾವನ್ನಪ್ಪಿದ ದಾರುಣ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ.

ಸುಧಾ ಹಾಗೂ ಸಿದ್ದಪ್ಪ ದಂಪತಿಯ 5 ತಿಂಗಳ ಶಿವಾನಿ ಮೃತಪಟ್ಟ ಹಸುಗೂಸು.
ಮನೆಯ ಪಡಸಾಲೆಯಲ್ಲಿ ಮಗುವನ್ನ ಮಲಗಿಸಿ ತಾಯಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ನಾಯಿ ಹಸುಗೂಸನ್ನ ಮನಬಂದಂತೆ ಕಚ್ಚಿ ಬಿಸಾಕಿದೆ. ಪರಿಣಾಮ ಮಗು ಅರಜೀವಾವಸ್ಥೆಗೊಂಡಿದ್ದು, ಮಗುವನ್ನು ಬೀದರ್ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ದಂಪತಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದು, ಶಿವಾನಿ ನಾಲ್ಕನೇ ಹೆಣ್ಣು ಮಗುವಾಗಿತ್ತು. ಬೀದಿ ನಾಯಿಗಳಿಗೆ ಕಡಿವಾಣ ಹಾಕದೆ ಮಹಾ ನಿರ್ಲಕ್ಷ್ಯ ಮಾಡುತ್ತಿರುವ ಹುಮ್ನಾಬಾದ್ ಪುರಸಭೆ ಅಧಿಕಾರಿಗಳ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.