ಕೋಲ್ಕತ್ತಾ,ಮೇ. 07 (DaijiworldNews/TA): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ವಿವಿಧ ಭಾಗಗಳಲ್ಲಿ ರಾಜಕೀಯ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ಬಿಜೆಪಿ ನಾಯಕ, ಪಕ್ಷದ ಪ್ರಮುಖ ಮುಖಂಡ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಬುಧವಾರ ರಾತ್ರಿ ಸುಮಾರು 10.20ರ ವೇಳೆಗೆ ಚಂದ್ರನಾಥ್ ರಥ್ ಅವರು ಬಾರಾಸಾತ್ನಲ್ಲಿರುವ ತಮ್ಮ ನಿವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ದೋಹಾರಿಯಾ ಪ್ರದೇಶ ತಲುಪುತ್ತಿದ್ದಂತೆಯೇ ಬೈಕ್ನಲ್ಲಿ ಬಂದ ಕೆಲ ಅಪರಿಚಿತರು ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವರಲ್ಲಿ ಒಬ್ಬ ವ್ಯಕ್ತಿ ಕಾರಿನ ಕಿಟಕಿಯ ಬಳಿ ಬಂದು ಚಂದ್ರನಾಥ್ ರಥ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಕಾರು ಚಾಲಕನನ್ನು ತಕ್ಷಣ ಕೋಲ್ಕತ್ತಾದ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸುವೇಂದು ಅಧಿಕಾರಿ ಆಸ್ಪತ್ರೆಗೆ ಧಾವಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ರಾಜ್ಯ ಸರ್ಕಾರ ಮತ್ತು ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮಾತನಾಡಿ, “ವಿರೋಧ ಪಕ್ಷದ ನಾಯಕನ ಆಪ್ತ ಸಹಾಯಕನನ್ನೇ ಗುರಿಯಾಗಿಸಿ ಕೊಲ್ಲಲಾಗಿದೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಸಾಕ್ಷಿ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.
ಚಂದ್ರನಾಥ್ ರಥ್ ಅವರು 2018ರಿಂದ ಸುವೇಂದು ಅಧಿಕಾರಿ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಹಿನ್ನೆಲೆಯೂ ಹೊಂದಿದ್ದರು. ಅವರ ಹತ್ಯೆ ಬಿಜೆಪಿ ಕಾರ್ಯಕರ್ತರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತ ತೃಣಮೂಲ ಕಾಂಗ್ರೆಸ್ ಕೂಡ ಈ ಹತ್ಯೆಯನ್ನು ಖಂಡಿಸಿದ್ದು, ಬಿಜೆಪಿ ಮೇಲೆಯೇ ಪ್ರತಿಯಾಗಿ ಆರೋಪ ಮಾಡಿದೆ. ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, “ಮಧ್ಯಮಗ್ರಾಮದಲ್ಲಿ ನಡೆದ ಚಂದ್ರನಾಥ್ ರಥ್ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆದರೆ ಕಳೆದ ಮೂರು ದಿನಗಳಲ್ಲಿ ಬಿಜೆಪಿ ಪ್ರೇರಿತ ಹಿಂಸಾಚಾರದಲ್ಲಿ ನಮ್ಮ ಮೂವರು ಕಾರ್ಯಕರ್ತರು ಮೃತಪಟ್ಟಿದ್ದಾರೆ. ಎಲ್ಲಾ ಘಟನೆಗಳಿಗೂ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಯಬೇಕು,” ಎಂದು ಟಿಎಂಸಿ ಒತ್ತಾಯಿಸಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಮೇ 4ರಿಂದ ಪಶ್ಚಿಮ ಬಂಗಾಳದ ಹಲವೆಡೆ ಬೆದರಿಕೆ, ಹಲ್ಲೆ ಹಾಗೂ ಕೊಲೆ ಪ್ರಕರಣಗಳು ವರದಿಯಾಗುತ್ತಿವೆ. ಡಿಜಿಪಿ ಸಿದ್ಧನಾಥ್ ಗುಪ್ತಾ ನೀಡಿರುವ ಮಾಹಿತಿಯಂತೆ, ಇದುವರೆಗೆ 200ಕ್ಕೂ ಹೆಚ್ಚು ಎಫ್ಐಆರ್ಗಳು ದಾಖಲಾಗಿದ್ದು, 433 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ 1,100ಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ನ್ಯಾನೂರ್ ಮತ್ತು ನ್ಯೂ ಟೌನ್ ಪ್ರದೇಶಗಳಲ್ಲಿಯೂ ಸಾವಿನ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.