ಬೆಂಗಳೂರು, ಮೇ. 06 (DaijiworldNews/AK): ವಿಧಾನಸಭೆಯ ಶಾಸಕನಾಗಿ ಪ್ರಮಾಣವಚನ ಸ್ವೀಕಾರಕ್ಕೆ ಅನುಮತಿ ಕೇಳಿದ್ದೆವು. ಆದರೆ ಸ್ಪೀಕರ್ ಯು.ಟಿ ಖಾದರ್ ಅವರು ಅವಕಾಶ ನೀಡಿರಲಿಲ್ಲ. ಆದ್ದರಿಂದ ಮಾನ್ಯ ರಾಜ್ಯಪಾಲರ ಬಳಿ ಹೋಗಿ ದೂರು ನೀಡುವುದು ಅನಿವಾರ್ಯವಾಗಿತ್ತು ಎಂದು ಶೃಂಗೇರಿ ಶಾಸಕ ಡಿ.ಎನ್ ಜೀವರಾಜ್ ಅವರು ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಮಾಣವಚನ ಸ್ವೀಕಾರಕ್ಕೆ ಸ್ಪೀಕರ್ ಅವರು ಸೂಕ್ತ ಸಮಯದಲ್ಲಿ ಅವಕಾಶ ನೀಡಲಿಲ್ಲ. ಪರಿಸ್ಥಿತಿ ಗಂಭೀರವಾದ್ದರಿಂದ ಲೋಕಭವನದವರೆಗೆ ಹೋಗಬೇಕಾಯಿತು ಎಂದು ಹೇಳಿದರು.
ಪ್ರಮಾಣವಚನಕ್ಕೆ ಅವಕಾಶ ನೀಡುವುದು ಹೈವೊಲ್ಟೇಜ್ ರೀತಿ ಪರಿವರ್ತನೆಯಾಗಿತ್ತು. ಇದೊಂದು ಸರಳವಾಗಿದ್ದು, ಈ ರೀತಿ ಆಗುವುದು ಇಷ್ಟೋಂದು ಅವಶ್ಯಕತೆ ಇರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಗೆಲುವು ಮತ್ತು ಸೋಲು ಇದ್ದದ್ದೇ. ಆದರೆ ಇಲ್ಲಿ ಗಮನಿಸಬೇಕಾದ ಒಂದು ಬೆಳವಣಿಗೆ ನಡೆದಿದೆ. ಒಂದು ಹೊಸ ಸಂಪ್ರದಾಯ ಸೃಷ್ಟಿಯಾಗಿತ್ತು. ಸೋತ ಕೂಡಲೇ ತಮ್ಮದೇ ಸರ್ಕಾರ ಇದೆ ಎಂದು ದೂರು ನೀಡಿ ಎಫ್ಐಆರ್ ಮಾಡಿದರೆ ಹೇಗೆ. ಮುಂದಿನ ದಿನಗಳಲ್ಲಿ ಉಪ ಚುನಾವಣೆಗೂ ಸ್ಪರ್ಧಿಸುವಂತಿಲ್ಲ ಎಂದಾಗುತ್ತದೆ. ಅಲ್ಲದೆ ಮರು ಮತ ಏಣಿಕೆಗೂ ಕೇಳೋ ಹಾಗಿಲ್ಲ. ಇಷ್ಟೇಲ್ಲ ಹೋರಾಟ ಮಾಡಿ ಗೆದ್ದವರ ಮನಸ್ಥಿತಿ ಕೆಡಿಸುವ ಸಂಚು ಆಗುತ್ತದೆ. ನಮ್ಮ ಸರ್ಕಾರದಲ್ಲಿ ನಮ್ಮದೇ ಅಧಿಕಾರಿಗಳು ಇದ್ದಾರೆ ಅಂತ ಗೆದ್ದವರ ಮೇಲೆ ಒತ್ತಡ ಹಾಕುವುದು ನಡೆದಿದೆ ಎಂದು ಭಾವಿಸಿದ್ದೇನೆ ಎಂದರು.
ಪ್ರಮಾಣವಚನಕ್ಕೆ ಅವಕಾಶ ನೀಡುತ್ತೇವೆ. ಎರಡು ದಿನ ಬಿಟ್ಟು ಭೇಟಿ ಮಾಡಲಾಗುವುದು ಎಂದು ಸ್ಪೀಕರ್ ಯು.ಟಿ ಖಾದರ್ ಅವರು ನಮಗೆ ತಿಳಿಸಿದ್ದಿದ್ದರೆ ನಾವು ಗೌರವಾನ್ವಿತ ರಾಜ್ಯಪಾಲರ ಬಳಿಗೆ ಹೋಗುತ್ತಿರಲಿಲ್ಲ. ಸ್ಪೀಕರ್ ಅವರು ಬೆಂಗಳೂರಿನಲ್ಲಿ ಲಭ್ಯವಿಲ್ಲದ ಕಾರಣ ಭೇಟಿ ಮಾಡಲು ಆಗಲಿಲ್ಲ. ಪ್ರಮಾಣವಚನಕ್ಕೆ ವ್ಯವಸ್ಥೆ ಮಾಡಿ ಎಂದು ವಿಧಾನಸಭೆಯ ಕಾರ್ಯದರ್ಶಿಗಳಿಗೆ ಪತ್ರಕೊಟ್ಟು ಕೇಳಿದ್ದೆ. ಮತ್ತೊಂದು ಕಡೆ ರಾಜ್ಯಪಾಲರೂ ಪ್ರಮಾಣವಚನಕ್ಕೆ ಸಲಹೆ ನೀಡಿರಬಹುದು. ಇದಾದ ನಂತರ ಪ್ರಮಾಣವಚನಕ್ಕೆ ಪತ್ರ ಬಂದಿದೆ ಎಂದರು.
ಮರುಮತ ಎಣಿಕೆ ನಂತರ ಬಿಜೆಪಿ ಗೆಲುವು ಸಾಧಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿರುವ ರೀತಿ ನನಗೆ ಬಹಳ ಅಶ್ಚರ್ಯ ತಂದಿದೆ. ಇವರಿಬ್ಬರೂ ರಾಜಕೀಯದಲ್ಲಿ ಬಹಳ ವರ್ಷದ ಅನುಭವ ಇರುವವರು. ಯಾಕೆ ಅವರು ಇಷ್ಟು ಹಟ ಹಿಡಿದಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಆ ರೀತಿ ಮಾತನಾಡಬೇಡಿ ಎಂದು ಪದೇ ಪದೇ ಮನವಿ ಮಾಡಿದ್ದೇನೆ. ಸಾಮಾನ್ಯವಾದುದನ್ನು ಯಾಕೆ ಸಂಕೀರ್ಣ ಮಾಡುತ್ತಾರೆ. ಸರ್ಕಾರದ ಮುಖ್ಯಸ್ಥರಾಗಿ ನೀವೂ ನನ್ನ ರಕ್ಷಣೆಗೆ ಬನ್ನಿ ಎಂದು ಹೇಳಿದ್ದೆ ಎಂದರು.