ಬೆಂಗಳೂರು, ಮೇ. 06 (DaijiworldNews/TA): 77 ವರ್ಷದ ಸಿದ್ದರಾಮಯ್ಯ ಇದೀಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮೊದಲು 82 ವರ್ಷದ ಪಿಣರಾಯಿ ವಿಜಯನ್ ಈ ಸ್ಥಾನದಲ್ಲಿದ್ದರು. ಆದರೆ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಸೋಲು ಅನುಭವಿಸಿದ ಬಳಿಕ ವಿಜಯನ್ ರಾಜೀನಾಮೆ ನೀಡಿದ್ದು, ಇದೀಗ ಸಿದ್ದರಾಮಯ್ಯ ಅಗ್ರಸ್ಥಾನಕ್ಕೇರಿದ್ದಾರೆ.
ಇತ್ತೀಚೆಗೆ ಕರ್ನಾಟಕದಲ್ಲಿ ‘ಸುದೀರ್ಘಾವಧಿ ಮುಖ್ಯಮಂತ್ರಿ’ ಎಂಬ ದಾಖಲೆಗೂ ಸಿದ್ದರಾಮಯ್ಯ ಹೆಸರಾಗಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಅವರು, 2026ರ ಜನವರಿ 6ರಂದು ಒಟ್ಟು 2,792 ದಿನಗಳ ಕಾಲ ಆಡಳಿತ ನಡೆಸಿದ್ದ ದೇವರಾಜ ಅರಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಬಳಿಕ ಅದನ್ನು ಮೀರಿ ರಾಜ್ಯದ ಇತಿಹಾಸದಲ್ಲಿ ದೀರ್ಘಾವಧಿ ಆಡಳಿತ ನಡೆಸಿದ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡಿದ್ದಾರೆ.
ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಿದ್ದರಾಮಯ್ಯ ಅವರ ರಾಜಕೀಯ ಅನುಭವ ಮತ್ತು ದೀರ್ಘಾವಧಿ ಆಡಳಿತ ಮತ್ತೊಮ್ಮೆ ಗಮನಸೆಳೆಯುತ್ತಿದೆ.