ಚಿತ್ರದುರ್ಗ, ಮೇ. 06 (DaijiworldNews/AK): ಮುಖ್ಯಮಂತ್ರಿಗಳು ಗ್ಯಾರಂಟಿಗಳಿಂದ ಬೀಗುತ್ತಿದ್ದಾರೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಅಷ್ಟೊಂದು ವಿಶ್ವಾಸ ಇದ್ದರೆ ಸಿಎಂ ಅವರು ಯಾಕೆ 15 ದಿನಗಳ ಕಾಲ ಬಾಗಲಕೋಟೆಗೆ ಬಂದು ಕೂರಬೇಕಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪ ಚುನಾವಣೆಯ ಸೋಲಿನಿಂದ ಹತಾಶರಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರಂಥ ದಿಟ್ಟ ನಾಯಕತ್ವ ದೇಶಕ್ಕೆ ಸಿಕ್ಕಿದೆ. ನಿತಿನ್ ನಬೀನ್ ಜೀ ಅವರು ಒಬ್ಬ ಯುವ ರಾಷ್ಟ್ರೀಯ ಅಧ್ಯಕ್ಷರು ನೇತೃತ್ವ ವಹಿಸಿಕೊಂಡಿದ್ದಾರೆ. ಅಮಿತ್ ಶಾ ಜೀ ಅವರಂಥ ಚುನಾವಣಾ ಚಾಣಕ್ಯ ನಮ್ಮ ಜೊತೆಗಿದ್ದಾರೆ. ಉಪ ಚುನಾವಣೆ ಸೋಲಿನ ಸಂಬಂಧ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಗೃಹಲಕ್ಷ್ಮಿ ಯೋಜನೆ ಇವತ್ತು ಚುನಾವಣಾ ಲಕ್ಷ್ಮಿಯಾಗಿ ಪರಿವರ್ತನೆಯಾಗಿದೆ. ಇವರು ಬಡವರಿಗೆ ಯೋಜನೆಗಳನ್ನು ನೀಡಲಿ. ಇವರೊಬ್ಬರೇ ಯೋಜನೆಗಳನ್ನು ನೀಡಿಲ್ಲ. ಯಡಿಯೂರಪ್ಪನವರು ಹಿಂದೆ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಬೈಸಿಕಲ್ ಯೋಜನೆಗಳನ್ನು ನೀಡಿದ್ದರು. ಇನ್ನೂ ಹಲವು ಒಳ್ಳೆಯ ಯೋಜನೆ ಕೊಟ್ಟಿದ್ದಾರೆ. ಆದರೆ, ಗೃಹಲಕ್ಷ್ಮಿ ಇವತ್ತು ಚುನಾವಣಾ ಲಕ್ಷ್ಮಿಯಾಗಿರುವುದು ಖಂಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು.
ಪ್ರತಿ ತಿಂಗಳ ಬದಲು ಅದನ್ನು ತಡೆಹಿಡಿದು ಉಪ ಚುನಾವಣೆಯಲ್ಲಿ ಮೊನ್ನೆ ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದಿನ ಕಂತನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಾಗಲೇ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. ಇವರು ಜನರಿಗೆ ಆಮಿಷವೊಡ್ಡುವ ರೀತಿಯಲ್ಲಿ ಯೋಜನೆ ನೀಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ದೂರದೃಷ್ಟಿಯಿಂದ ಭಾಗ್ಯಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ತಂದಿದ್ದರು. ಈ ಉಪ ಚುನಾವಣೆ ಸೋಲಿನಿಂದ ಬಿಜೆಪಿ, ಬಿಜೆಪಿ ಕಾರ್ಯಕರ್ತರು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ. ಇವೆಲ್ಲವನ್ನೂ ಮೀರಿ ಸಂಘಟನೆ ಬಲಪಡಿಸುತ್ತೇವೆ. ಹಿರಿಯರ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಸರಕಾರ ತರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.
ಜನರ ಕ್ಷಮೆ ಕೇಳಲು ಒತ್ತಾಯ
ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿಯವರು ಪ್ರವಾಸ ಮಾಡಿದ್ದರು. ರಾಜ್ಯ ಹೈಕೋರ್ಟಿನ ಆದೇಶದಂತೆ ಶೃಂಗೇರಿಯಲ್ಲಿ ಮರು ಮತ ಎಣಿಕೆ ನಡೆದು ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಗೆದ್ದಿದ್ದಾರೆ. ರಾಹುಲ್ ಗಾಂಧಿಯವರು ಈಗ ದೇಶದ ಜನರ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸ್ಪೀಕರ್ ರಾಜಕಾರಣ ಮೀರಿ ನಡೆದುಕೊಳ್ಳಬೇಕು..
ಮಾನ ಮರ್ಯಾದೆ ಇದ್ದರೆ ಸಭಾಧ್ಯಕ್ಷರು ಅವರಿಗೆ ತಕ್ಷಣ ಪ್ರಮಾಣವಚನ ಬೋಧಿಸಬಹುದು. ಆದರೆ, ಸಭಾಧ್ಯಕ್ಷರು ತಮ್ಮ ಸಾಂವಿಧಾನಿಕ ಸ್ಥಾನಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಅವರು ರಾಜಕಾರಣ ಮೀರಿ ನಡೆದುಕೊಳ್ಳಲಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ಸಿನವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ದೂರಿದರು. ಸ್ಪೀಕರ್ ಅವರು ರಾಜಕಾರಣ, ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ ನ್ಯಾಯಯುತವಾಗಿ ನಡೆದುಕೊಳ್ಳಲಿ. ಕೂಡಲೇ ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಲಿ ಎಂದು ಮನವಿ ಮಾಡಿದರು.
ಪರಾಜಿತ ಅಭ್ಯರ್ಥಿ ರಾಜೇಗೌಡರು ಹೈಕೋರ್ಟಿಗೆ ಹೋಗಲು ಸಮಯಾವಕಾಶ ಕೊಡಲು ಕಟ್ಟುಕಥೆ ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.