ಬೆಂಗಳೂರು, ಮೇ. 06 (DaijiworldNews/TA): ದೇಶದ ಅತ್ಯಂತ ಸಂವೇದನಾಶೀಲ ಪ್ರದೇಶಗಳಲ್ಲಿ ಒಂದಾದ ಬೆಂಗಳೂರುದಲ್ಲಿರುವ ಇಸ್ರೋ ಐಸೈಟ್ ಕ್ಯಾಂಪಸ್ ಮೇಲ್ಭಾಗದಲ್ಲಿ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸಿರುವ ಘಟನೆ ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ. ನಿಷೇಧಿತ ‘ನೋ ಡ್ರೋನ್ ಝೋನ್’ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಗಂಭೀರವಾಗಿ ಪರಿಗಣಿಸಲಾಗಿದೆ.

ಸಿಐಎಸ್ಎಫ್ ಯುನಿಟ್ನ ಸಬ್ ಇನ್ಸ್ಪೆಕ್ಟರ್ ನೀಡಿದ ದೂರಿನ ಪ್ರಕಾರ, ಮೇ 2ರಂದು ಬೆಳಿಗ್ಗೆ ಸುಮಾರು 8:16ರ ವೇಳೆಗೆ 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಸುಮಾರು 10 ರಿಂದ 12 ಸೆಕೆಂಡ್ಗಳ ಕಾಲ ಕ್ಯಾಂಪಸ್ ಮೇಲ್ಭಾಗದಲ್ಲಿ ಹಾರಾಡಿರುವುದು ಪತ್ತೆಯಾಗಿದೆ. ನಂತರ ಅದು ಕಣ್ಮರೆಯಾಗಿದ್ದು, ಯಾರು ಹಾರಿಸಿದರು ಎಂಬುದು ಇನ್ನೂ ತಿಳಿದುಬಂದಿಲ್ಲ.
ಇಸ್ರೋ ಐಸೈಟ್ ಕ್ಯಾಂಪಸ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವುದರಿಂದ, ಇಲ್ಲಿ ಯಾವುದೇ ಅನುಮತಿ ಇಲ್ಲದೆ ವೈಮಾನಿಕ ಚಟುವಟಿಕೆಗಳನ್ನು ನಡೆಸುವುದು ಕಾನೂನುಬಾಹಿರ. ಇಂತಹ ಘಟನೆಗಳು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರೋನ್ ಹಾರಿಸಿದವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿಷೇಧಿತ ಪ್ರದೇಶವೆಂದು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಡ್ರೋನ್ ಹಾರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭದ್ರತಾ ಸಿಬ್ಬಂದಿ ಒತ್ತಾಯಿಸಿದ್ದಾರೆ.