ತಿರುವನಂತಪುರಂ, ಮೇ. 06 (DaijiworldNews/TA): ಕೇರಳದಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸಿದ್ದು, ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಎಲ್ಡಿಎಫ್ ಸರ್ಕಾರವನ್ನು ಸೋಲಿಸಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದು ದಶಕದ ಬಳಿಕ ಮತ್ತೆ ಅಧಿಕಾರಕ್ಕೆ ಏರಲು ಸಜ್ಜಾಗಿದೆ.

2016ರಿಂದ ಆಡಳಿತ ನಡೆಸುತ್ತಿದ್ದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ಉಂಟಾದ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿದೆ. ನಿರುದ್ಯೋಗ, ಆರ್ಥಿಕ ಸಂಕಷ್ಟ ಹಾಗೂ ಇತ್ತೀಚಿನ ವಿವಾದಗಳು ಎಲ್ಡಿಎಫ್ ಪತನಕ್ಕೆ ಕಾರಣಗಳಾಗಿ ಪರಿಣಮಿಸಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸತತ ಸೋಲುಗಳಿಂದ ಹಿನ್ನಡೆಯಲ್ಲಿದ್ದ ಕಾಂಗ್ರೆಸ್ಗೆ ಈ ಗೆಲುವು ಹೊಸ ಶಕ್ತಿಯನ್ನು ನೀಡಿದ್ದು, ರಾಜ್ಯಾದ್ಯಂತ ನಡೆದ ಒಗ್ಗಟ್ಟಿನ ಹೋರಾಟ ಯುಡಿಎಫ್ಗೆ ಭದ್ರ ನೆಲೆಯನ್ನು ಕಲ್ಪಿಸಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್ಗೆ ದೊಡ್ಡ ಉತ್ತೇಜನ ನೀಡಿದೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ಗೆಲುವು ಬದಲಾವಣೆಯನ್ನು ಬಯಸಿದ ಜನರ ತೀರ್ಪು ಎಂದು ನಾಯಕರು ಹೇಳಿದ್ದಾರೆ. ಇನ್ನೊಂದೆಡೆ, ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಎದುರಾಗಿದೆ. ವಿ. ಡಿ. ಸತೀಶನ್, ಕೆ. ಸಿ. ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತ್ತಲ ನಡುವೆ ಸ್ಪರ್ಧೆ ಇದ್ದರೂ, ವಿ. ಡಿ. ಸತೀಶನ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಕಳೆದ ಐದು ವರ್ಷಗಳಿಂದ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವ, ಹಾಗೂ ಈ ಚುನಾವಣೆಯಲ್ಲಿ ಮೈತ್ರಿಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿದ ಹಿನ್ನೆಲೆ ಅವರಿಗೆ ಶಾಸಕರ ಬೆಂಬಲ ಹಾಗೂ ಹೈಕಮಾಂಡ್ ವಿಶ್ವಾಸವಿದೆ ಎನ್ನಲಾಗಿದೆ. ಇಂದು ತಿರುವನಂತಪುರಂನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಂತಿಮವಾಗಿ ಸಿಎಂ ಅಭ್ಯರ್ಥಿಯ ಘೋಷಣೆ ಆಗುವ ನಿರೀಕ್ಷೆಯಿದೆ.