ಕೋಲ್ಕತ್ತಾ, ಮೇ. 05 (DaijiworldNews/TA): ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ಬಳಿಕ ರಾಜಕೀಯ ತೀವ್ರಗೊಂಡಿದ್ದು, ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಸತತ ಮೂರು ಬಾರಿ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಸೋಲನುಭವಿಸಿದ್ದರೂ, ತಾವು ಸೋಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ರಾಜೀನಾಮೆ ಕೊಡಲ್ಲ. ನಾನು ಸೋತಿಲ್ಲ, ಹೀಗಾಗಿ ರಾಜಭವನಕ್ಕೆ ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಜೊತೆಗೆ, ಬಿಜೆಪಿಗೆ ಸಿಕ್ಕಿರುವ ಜನಾದೇಶವನ್ನು “ಲೂಟಿಯ ಫಲಿತಾಂಶ” ಎಂದು ಆರೋಪಿಸಿ ತೀವ್ರ ವಾಗ್ದಾಳಿ ನಡೆಸಿದರು.
ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರವಾಗಿರುವ ನಡುವೆ, ಬ್ಯಾನರ್ಜಿ ಅವರ ಈ ನಿಲುವು ರಾಜ್ಯದಲ್ಲಿ ಸಂವಿಧಾನಾತ್ಮಕ ಅನಿಶ್ಚಿತತೆಗೆ ಕಾರಣವಾಗಬಹುದು ಎಂದು ರಾಜಕೀಯ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ.
ವಿಧಾನಸಭೆಯ ಅವಧಿ ಮೇ 7ರಂದು ಮುಕ್ತಾಯಗೊಳ್ಳಲಿದ್ದು, ಗೆದ್ದ ಪಕ್ಷ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರೆ ರಾಜ್ಯಪಾಲರು ಆಹ್ವಾನಿಸುವ ಸಾಧ್ಯತೆ ಇದೆ. ಇಲ್ಲವಾದರೆ ರಾಷ್ಟ್ರಪತಿ ಆಳ್ವಿಕೆಯ ಪ್ರಶ್ನೆಯೂ ಎದುರಾಗಬಹುದು ಎಂದು ಮೂಲಗಳು ಸೂಚಿಸಿವೆ.
ಭವಾನಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, “ಬಿಜೆಪಿ ಚುನಾವಣೆಯಲ್ಲಿ 100 ಸ್ಥಾನಗಳನ್ನು ಕದ್ದಿದೆ. ಇದು ಲೂಟಿ, ಲೂಟಿ, ಲೂಟಿ. ಸರ್ಕಾರ ಮತ್ತು ಚುನಾವಣಾ ಆಯೋಗ ಇದಕ್ಕೆ ಸಹಕರಿಸಿದೆ” ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ನೇರ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿದ ಬ್ಯಾನರ್ಜಿ, “ಮಹಾರಾಷ್ಟ್ರ, ಹರಿಯಾಣ, ಬಿಹಾರ ಬಳಿಕ ಈಗ ಬಂಗಾಳದಲ್ಲೂ ಇದೇ ರೀತಿಯ ಲೂಟಿ ನಡೆದಿದೆ. ನ್ಯಾಯಾಂಗ ದುರ್ಬಲವಾಗಿದ್ದಾಗ ಮತ್ತು ಚುನಾವಣಾ ಆಯೋಗ ಪಕ್ಷಪಾತದಿಂದ ವರ್ತಿಸಿದಾಗ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ” ಎಂದು ಹೇಳಿದರು.
ಇದಲ್ಲದೆ, ಮತ ಎಣಿಕೆ ಕೇಂದ್ರದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಅವರು, “ನನ್ನ ಹೊಟ್ಟೆ ಮತ್ತು ಬೆನ್ನಿಗೆ ಹೊಡೆದರು. ಸಿಸಿಟಿವಿ ಆಫ್ ಆಗಿತ್ತು. ನನ್ನನ್ನು ಹೊರಗೆ ತಳ್ಳಲಾಯಿತು. ಒಬ್ಬ ಮಹಿಳೆಯಾಗಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಲಾಯಿತು” ಎಂದು ಹೇಳಿದ್ದಾರೆ.
ಕೇಂದ್ರ ಪಡೆಗಳ ನಡೆ ಕುರಿತು ಪ್ರಶ್ನೆ ಎತ್ತಿದ ಅವರು, “ಹಿಂದಿನ ಬಿಜೆಪಿ ಸರ್ಕಾರಗಳನ್ನು ನೋಡಿದ್ದೇನೆ, ಆದರೆ ಈ ರೀತಿಯ ಘಟನೆ ನಡೆದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಪಕ್ಷದ ಕಾರ್ಯತಂತ್ರ ಕುರಿತು ಬಹಿರಂಗಪಡಿಸಲು ನಿರಾಕರಿಸಿದ ಅವರು, “ಇಂಡಿಯಾ ಬ್ಲಾಕ್ ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಅವರ ಬೆಂಬಲವಿದೆ” ಎಂದು ತಿಳಿಸಿದ್ದಾರೆ.