ನವದೆಹಲಿ, ಮೇ. 05 (DaijiworldNews/AA): ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಚುನಾವಣಾ ತಂತ್ರಗಳು ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಉತ್ತಮವಾಗಿತ್ತು ಎಂದು ಸಂಸದ ಶಶಿ ತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಮೋದಿ ಮತ್ತು ಅಮಿತ್ ಶಾ ಚುನಾವಣೆಗಳನ್ನು ಅತ್ಯಂತ ವೃತ್ತಿಪರವಾಗಿ ನಡೆಸುತ್ತಾರೆ. ಬಲವಾದ ಸಂಘಟನೆ ಮತ್ತು ಸಾಕಷ್ಟು ಸಂಪನ್ಮೂಲಗಳಿವೆ. ಅದರಿಂದ ಎಲ್ಲರೂ ಕಲಿಯಬೇಕಾದ ವಿಷಯಗಳಿವೆ. ಆದರೆ ರಾಜಕೀಯ ಸಂದೇಶಗಳು ಜನರನ್ನು ಒಂದಾಗಿಸುವಂತಿರಬೇಕು. ಭಾರತೀಯರನ್ನು ವಿಭಜಿಸುವುದಕ್ಕಿಂತ ಒಂದಾಗಿಸುವ ಸಂದೇಶವೇ ಇರಲಿ ಎಂದು ನಾನು ಆಶಿಸುತ್ತೇನೆ" ಎಂದು ಹೇಳಿದರು.
"ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮಿಶ್ರ ಫಲಿತಾಂಶಗಳ ಹಿನ್ನೆಲೆ ಕಾಂಗ್ರೆಸ್ ಪಕ್ಷ ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ತನ್ನ ತಂತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು" ಎಂದರು.