ಬೆಂಗಳೂರು, ಮೇ. 05 (DaijiworldNews/AA): ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಇದು ಸರ್ ಪ್ರೈಸ್ ಫಲಿತಾಂಶ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, "ತಮಿಳುನಾಡಿನಲ್ಲಿ ಫಲಿತಾಂಶ ಆಶ್ಚರ್ಯಕರವಾಗಿದೆ. ಯುವಕರು ವಿಜಯ್ಗೆ ಮತ ಹಾಕಿದ್ದಾರೆ. ಚುನಾವಣೆಗಳಲ್ಲಿ ಈ ತರ ಆಗುತ್ತೆ, ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ" ಎಂದರು.
"ಪಶ್ಚಿಮ ಬಂಗಾಳದಲ್ಲಿ 15 ವರ್ಷ ಮಮತಾ ಬ್ಯಾನರ್ಜಿ ಇದ್ದರು. ಆಡಳಿತ ವಿರೋಧಿ ಅಲೆ ಇರಬಹುದು. ನಾನು ಅಲ್ಲಿಗೆ ಹೋಗಿಲ್ಲ. SIR ಮಾಡಿ 91 ಲಕ್ಷ ಮತ ರದ್ದು ಮಾಡಿದ್ರು. ಇವೆಲ್ಲ ಕಾರಣ ಇರಬಹುದು. ನನಗೆ ನಿಖರ ಮಾಹಿತಿ ಇಲ್ಲ. ಕೇರಳ ನಿರೀಕ್ಷೆ ಇತ್ತು. ನಿರೀಕ್ಷೆಗಿಂತ ಜಾಸ್ತಿ ಬಂದಿದೆ. ಕೇರಳ ಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ" ಎಂದು ನುಡಿದರು.
ಉಪಚುನಾವಣೆ ಫಲಿತಾಂಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಉಪಚುನಾವಣೆ ಎರಡು ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ಬಿಜೆಪಿ ಅವರು ಉಪಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿ ಅಂತ ಪ್ರಚಾರ ಮಾಡಿದ್ರು. 2028 ಚುನಾವಣೆಗೆ ದಿಕ್ಸೂಚಿ ಅಂತ ಪ್ರಚಾರ ಮಾಡಿದ್ರು. ಈಗ ನಾವು ಗೆದ್ದಿದ್ದೇವೆ. ಬಿಜೆಪಿ ಪ್ರಕಾರ 2028ಕ್ಕೂ ನಾವೇ ಬರ್ತೀವಿ ಅಂತ ಆಯ್ತಲ್ಲ. ಮತದಾರರು, ಕಾರ್ಯಕರ್ತರು, ಮಂತ್ರಿಗಳು, ಶಾಸಕರಿಗೆ ಸರ್ಕಾರ, ಪಕ್ಷದ ವತಿಯಿಂದ ಧನ್ಯವಾದ ಹೇಳ್ತೀನಿ. ಕಳೆದ ಬಾರಿ 3 ಬೈ ಎಲೆಕ್ಷನ್ನಲ್ಲಿ ಗೆದ್ದಿದ್ದೇವೆ. ಈಗ ಮತ್ತೆ 2ರಲ್ಲಿ ಗೆದ್ದಿದ್ದೇವೆ. ನಮ್ಮ ಕಾರ್ಯಕ್ರಮ ಜನ ಮೆಚ್ಚಿದ್ದಾರೆ. ನಮ್ಮ ಕಾರ್ಯಕ್ರಮಗಳು ಜನರಿಗೆ ತಲುಪಿವೆ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆಯೋ ಪಕ್ಷ. ಗ್ಯಾರಂಟಿ ಯೋಜನೆಗಳು ನಮ್ಮನ್ನ ಕೈ ಹಿಡಿದಿವೆ. ನಮ್ಮನ್ನ ಗೆಲ್ಲಿಸಿದ ಎಲ್ಲಾ ಮತದಾರರಿಗೆ ಧನ್ಯವಾದಗಳು" ಎಂದರು.