ನವದೆಹಲಿ, ಮೇ. 05 (DaijiworldNews/AA): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ಆಯೋಗದ ಬೆಂಬಲದೊಂದಿಗೆ ಚುನಾವಣೆಯನ್ನು ಗೆದ್ದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಕಾಂಗ್ರೆಸ್ನಲ್ಲಿ ಹಾಗೂ ಹೊರಗೆ ಕೆಲವರು ಟಿಎಂಸಿಯ ಸೋಲಿನ ಬಗ್ಗೆ ಸಂತೋಷಪಡುತ್ತಿದ್ದಾರೆ. ಅವರು ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಜನಾದೇಶದ ಕಳ್ಳತನವಾಗಿದೆ. ಈ ದೇಶದ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡಲು ಪಣ ತೊಟ್ಟಿರುವ ಬಿಜೆಪಿಯ ಪ್ರಯತ್ನದ ಒಂದು ದೊಡ್ಡ ಹೆಜ್ಜೆಯಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಕ್ಷುಲ್ಲಕ ರಾಜಕೀಯವನ್ನು ಬದಿಗಿಡಿ. ಇದು ಒಂದು ಪಕ್ಷ ಅಥವಾ ಇನ್ನೊಂದು ಪಕ್ಷದ ಬಗ್ಗೆ ಅಲ್ಲ. ಇದು ಭಾರತದ ಬಗ್ಗೆ. ಬಿಜೆಪಿ ಚುನಾವಣಾ ಆಯೋಗದ ಬೆಂಬಲದೊಂದಿಗೆ ಚುನಾವಣೆಯನ್ನು ಗೆದ್ದಿದೆ. ಮಮತಾ ಜಿ ಅವರ ಮಾತನ್ನು ನಾವು ಒಪ್ಪುತ್ತೇವೆ. ಬಂಗಾಳದಲ್ಲಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಕದ್ದಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷದ ಸೋಲಿನಿಂದ ಕೆಲವರು ಸಂತೋಷಪಡುತ್ತಿದ್ದಾರೆ. ಆದರೆ ಅವರು ಕ್ಷುಲ್ಲಕ ರಾಜಕೀಯ ಮಾಡುವುದನ್ನು ಬಿಡಬೇಕು" ಎಂದು ಅವರು ಹೇಳಿದ್ದಾರೆ.