ಕೋಲ್ಕತ್ತಾ, ಮೇ. 05 (DaijiworldNews/AK): ಪಶ್ಚಿಮ ಬಂಗಾಳ ವಿಧಾನಸಭಾ ಫಲಿತಾಂಶ ಹೊರಬಿದ್ದಿದ್ದು, ಅಡಳಿತಾರೂಢ ಟಿಎಂಸಿ ಧೂಳೀಪಟವಾಗಿದ್ದರೆ ಬಿಜೆಪಿ 200ಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಂಡು ಪ್ರಚಂಡ ಗೆಲುವು ಸಾಧಿಸಿದೆ.

ಈ ನಡುವೆ ಭಾರತೀಯ ಜನತಾ ಪಕ್ಷದಿಂದ ಗೆದ್ದ ಕೆಲ ಜನ ಸಾಮಾನ್ಯ ಅಭ್ಯರ್ಥಿಗಳು ಗಮನ ಸೆಳೆದಿದ್ದಾರೆ. ಆಸ್ಗ್ರಾಮ ಕ್ಷೇತ್ರದಿಂದ ಸ್ಫರ್ಧಿಸಿದ್ದ ಮನೆ ಕೆಲಸ ಮಾಡುವ ಮಹಿಳೆ ಗೆದ್ದು ಬೀಗಿದ್ದರೆ, ಅತ್ತ ಪಾನಿಹಾಟಿಯಲ್ಲಿ ಕಣಕ್ಕಿಳಿದಿದ್ದ ಆರ್ಜಿ ಕಾರ್ ಮೆಡಿಕಲ್ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿಯೂ ವಿಜಯಪತಾಕೆ ಹಾರಿಸಿರೋದು ದೇಶದ್ಯಾಂತ ಸುದ್ದಿಯಾಗಿದೆ.
ಮನೆ ಕೆಲಸ ಮಾಡುತ್ತ ತಿಂಗಳಿಗೆ ಕೇವಲ 2,500 ರೂ. ಆದಾಯ ಹೊಂದಿದ್ದ ಕಲಿತಾ ಮಾಝಿ ಆಸ್ಗ್ರಾಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ರಾಜಕೀಯಕ್ಕೆ ಬರಲು ಮುನ್ನ ನಾಲ್ಕು ಮನೆಗಳಲ್ಲಿ ಗೃಹಕಾರ್ಯ ನಿರ್ವಹಿಸುತ್ತಿದ್ದರು. ಜನಾಧಾರಿತ ಅಭ್ಯರ್ಥಿಯಾಗಿ ಗಮನ ಸೆಳೆದಿದ್ದ ಅವರು 1,07,692 ಮತಗಳನ್ನು ಪಡೆದು ಎದುರಾಳಿ ಶ್ಯಾಮ ಪ್ರಸನ್ನ ಲೋಹಾರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದಾರೆ.
2021ರ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ ಇವರು, ತೃಣಮೂಲ ಕಾಂಗ್ರೆಸ್ನ ಅಭೇದಾನಂದ ಥಾಂಡರ್ ವಿರುದ್ಧ ಸೋತಿದ್ದರು. ಆದರೂ ಬಿಜೆಪಿ ಮತ್ತೆ ಈ ಬಾರಿಯೂ ಅವರಿಗೇ ಟಿಕೆಟ್ ನೀಡಿದ್ದು, ಕಲಿತಾ ಮಾಝಿ ಅವರ ಸ್ಥಳೀಯ ಸಂಪರ್ಕವೇ ಗೆಲುವಿನ ಹಿಂದಿನ ಕಾರಣ ಎನ್ನಲಾಗಿದೆ.