ತುಮಕೂರು, ಮೇ. 03 (DaijiworldNews/AK):ನಾಡುಕಂಡ ಜನಪ್ರಿಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇವಲ ವ್ಯಕ್ತಿಯಲ್ಲ, ಅವರು ಶಕ್ತಿ. ಚಿತ್ರದುರ್ಗದಲ್ಲಿ ಇದೇ 9 ರಂದು ನಡೆಯಲಿರುವ ಅಭಿಮಾನೋತ್ಸವದಲ್ಲಿ ಆ ಶಕ್ತಿ ತಿಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.

ತುಮಕೂರಿನ ಶ್ರೀಕ್ಷೇತ್ರ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿಯವರನ್ನು ಅಭಿಮಾನೋತ್ಸವಕ್ಕೆ ಆಹ್ವಾನಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಅಭಿಮಾನೋತ್ಸವಕ್ಕೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಲಕ್ಷಾಂತರ ಅಭಿಮಾನಿಗಳು ಬರಲಿದ್ದಾರೆ. ಜನಸಾಗರವೇ ಹರಿದು ಬರಲಿದೆ. ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ, ಎಲ್ಲಾ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಇಡೀ ರಾಜ್ಯದಲ್ಲಿ ಯಡಿಯೂರಪ್ಪ ಅವರ ಬಗ್ಗೆ ಇರುವ ಅಗಾಧವಾದ ವಿಶ್ವಾಸ ಇನ್ನೂ ಮಾಸಿಲ್ಲ. ಅವರ ಮೇಲೆ ಅದೇ ವಿಶ್ವಾಸವನ್ನು ಜನರು ಇಟ್ಟುಕೊಂಡಿದ್ದಾರೆ. ಕಾರ್ಯಕರ್ತರು ಸಂತೋಷ ಮತ್ತು ಹೆಮ್ಮೆಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದರು.
ನಾಡಿನ ಪರಮ ಪೂಜ್ಯರು, ಜಗದ್ಗುರುಗಳು, ಎಲ್ಲ ಸಮಾಜದ ಮಠಮಾನ್ಯಗಳ ಗುರುಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೊಂದು ಅಪರೂಪದ, ವಿಶೇಷವಾದ ಕಾರ್ಯಕ್ರಮ ಎಂದರು.
ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಯಿಂದ ಬರುವ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅವರು ಯಾವುದೇ ಅವಸರವಿಲ್ಲದೆ ಬಂದು ವಾಪಸ್ ಹೋಗಬೇಕು. ಊಟ ಮತ್ತು ಉಪಚಾರದಲ್ಲಿ ಯಾವುದೇ ಅಡಚಣೆಯಾಗಬಾರದು. ಜೋಪಾನವಾಗಿ ಬಂದು ಜೋಪಾನವಾಗಿ ಹೋಗಬೇಕು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದರಲ್ಲೇ ಅವರ ಜನಪರ ಕಾಳಜಿ ಅರ್ಥವಾಗುತ್ತದೆ ಎಂದು ವಿವರಿಸಿದರು.
ಶೃಂಗೇರಿಯಲ್ಲಿ ಬಿಜೆಪಿ ಗೆಲುವು...
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಗೆಲುವು ಸಾಧಿಸಿದ್ದಾರೆ. ಜೀವರಾಜ್ ಚುನಾವಣೆಯಲ್ಲಿ ಪರಾಭವಗೊಂಡಾಗಲೇ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಪ್ರಕರಣ ಸುಪ್ರೀಂಕೋರ್ಟ್ ವರೆಗೆ ಹೋಗಿತ್ತು. ಹೈಕೋರ್ಟ್ ಆದೇಶದ ನಂತರ ಮತ ಏಣಿಕೆ ಆಗಿದೆ. ಜೀವರಾಜ್ ಅವರು 56 ಮತಗಳ ಅಂತರದಿಂದ ಗೆದ್ದಿದ್ದಾರೆ. ಇದೊಂದು ಶುಭ ಸುದ್ದಿ ಎಂದು ಹೇಳಿದರು.
ಕಾಂಗ್ರೆಸ್ನವರು ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡ ಹಾಕಿದ್ದರು. ಫಲಿತಾಂಶ ಘೋಷಣೆ ಮಾಡಬಾರದಂತೆ ನೋಡಿಕೊಂಡಿದ್ದರು ಎಂದು ಆರೋಪಿಸಿದರು. ಪರಾಭವಗೊಂಡ ಅಭ್ಯರ್ಥಿ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಲು ಸಮಯ ಕೊಡಿ ಅನ್ನುವ ಕುತಂತ್ರ ನಡೆಯುತ್ತಾ ಇದೆ ಎಂದರು.
ಜನರ ಆಶೀವಾದದಿಂದ ಜೀವರಾಜ್ ಅವರು ಗೆಲುವು ಸಾಧಿಸಿದ್ದಾರೆ. ಈಗಾಗಲೇ ಮೂರು ವರ್ಷ ಶಾಸಕ ಸ್ಥಾನ ಸಿಗದೆ ಅವರಿಗೆ ಅನ್ಯಾಯವಾಗಿದೆ. ಜನರ ತೀರ್ಪನ್ನು ನಾವು ಗೌರವಿಸಬೇಕು. ಇನ್ನಾದರೂ ಅವರು ಶಾಸಕರಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.