ಬೆಂಗಳೂರು, ಮೇ. 03 (DaijiworldNews/AA): ಶೃಂಗೇರಿಯ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ದೊಡ್ಡ ಪಿತೂರಿ ನಡೆದಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂತಹ ಕ್ರಿಮಿನಲ್ ಕೃತ್ಯ ಮಾಡ್ತಾರೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ. ಮಾಜಿ ಶಾಸಕರಾದ ಜೀವರಾಜ್ ಅವ್ರೊಂದಿಗೆ ಕೆಲಸ ಮಾಡ್ತಿದ್ದ ಅಧಿಕಾರಿಗಳನ್ನು ಬಳಿಸಿಕೊಂಡಿದ್ದಾರೆ. ಇದು ದೇಶಕ್ಕೆ ಒಂದು ಸಾಕ್ಷಿ. ಇದರ ಬಗ್ಗೆ ವರದಿ ಬಂದಿದೆ. ಈ ಬಗ್ಗೆ ನಾನು ಅಧ್ಯಯನ ಮಾಡುತ್ತಿದ್ದೇನೆ" ಎಂದು ತಿಳಿಸಿದರು.
"ಯಾವ ರೀತಿ ಬ್ಯಾಲೆಟ್ ಬಾಕ್ಸ್ ಓಪನ್ ಮಾಡಿಸಿ ಈ ರೀತಿ ಮಾಡಬಹುದು? ಕೋರ್ಟ್ಗೆ ಹೋಗಿ ಬರಿ ಪೋಸ್ಟಲ್ ಬ್ಯಾಲೇಟ್ಗಳನ್ನೇ ಕೌಂಟ್ ಆಗಿದ್ದನ್ನೇ ಮತ್ತೆ ಕೌಂಟ್ ಮಾಡಬೇಕು ಅಂದಿರೋದು? ಅವ್ರದ್ದೇ ಏಜೆಂಟ್ ಸಹಿ ಮಾಡಿದ್ದನ್ನು ಮತ್ತೆ ಕೌಂಟ್ ಮಾಡಿಸಿದ್ದಾರೆ. ಇದು ಒಂದು ವ್ಯವಸ್ಥಿತ ಅಪರಾಧ" ಎಂದು ಹೇಳಿದರು.
ರಾತ್ರಿಯಿಂದಲೂ ನಾನು ಗಮನಿಸುತ್ತಿದ್ದೇನೆ. ನಾವು ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರದಿಂದಲೂ ನಾವು ಏನು ಮಾಡಬಹುದು ಎಂದು ನೋಡುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ" ಎಂದರು.