ನವದೆಹಲಿ, ಮೇ. 03 (DaijiworldNews/AA): ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಕಟ್ಟಡದ ಎರಡನೇ ಮಹಡಿಯಲ್ಲಿ ನಸುಕಿನ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. 14 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಸಿಬ್ಬಂದಿ ಸ್ಥಳಕ್ಕೆ ತಲುಪಿದ ವೇಳೆಗಾಗಲೇ ಬೆಂಕಿ ಕಟ್ಟಡದ ಮೂರನೇ ಮತ್ತು ನಾಲ್ಕನೇ ಮಹಡಿಗೆ ವ್ಯಾಪಕವಾಗಿ ಹರಡಿತ್ತು.
ವಿವೇಕ್ ವಿಹಾರ್ ಪೂರ್ವ ದೆಹಲಿಯ ಒಂದು ಪ್ರಮುಖ ಸ್ಥಳವಾಗಿದೆ. ಕಟ್ಟಡದಿಂದ ಹಲವರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದ್ದು, ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಕಟ್ಟಡದ ಹಲವು ಭಾಗಗಳು ಸುಟ್ಟುಹೋಗಿ, ಮೇಲಿನ ಮಹಡಿಯಿಂದ ಹೊಗೆ ಹೊರಬರುತ್ತಿತ್ತು. ಎಲ್ಲಾ ಶವಗಳನ್ನು ವಶಪಡಿಸಿಕೊಂಡು ದೆಹಲಿ ಪೊಲೀಸ್ ಅಪರಾಧ ತಂಡಕ್ಕೆ ಹಸ್ತಾಂತರ ಮಾಡಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಎಸಿ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಎಸಿಯಲ್ಲಿ ಸಂಭವಿಸಿದ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 12-15 ಜನರನ್ನು ರಕ್ಷಿಸಲಾಗಿದೆ. ಆದಾಗ್ಯೂ, 4-5 ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.