ಪುಣೆ, ಮೇ. 03 (DaijiworldNews/AA): 65 ವರ್ಷದ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಪುಣೆಯಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು.

ಸಾವಿರಾರು ಜನ ಪುಣೆಯ ನಾಸಿರಪುರ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು ನಾಲೈದು ಗಂಟೆ ತಡೆದು ಭಾರಿ ಪ್ರತಿಭಟನೆ ನಡೆಸಿದರು. ಅಪರಾಧಿಯನ್ನು ತಕ್ಷಣವೇ ಗಲ್ಲಿಗೆ ಹಾಕಬೇಕು ಇಲ್ಲವೇ ನಮ್ಮ ವಶಕ್ಕೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ರಸ್ತೆ ತಡೆ ಹಿನ್ನೆಲೆ ಪುಣೆ-ಬೆಂಗಳೂರಿನ ಹೆದ್ದಾರಿಯಲ್ಲಿ ಹತ್ತಾರು ಕಿ.ಮೀ ಟ್ರಾಫಿಕ್ ಜಾಮ್ ಉಂಟಾಯಿತು. ಪ್ರತಿಭಟನೆ ಮಧ್ಯರಾತ್ರಿಯವರೆಗೂ ನಡೆಯಿತು. ಕೊನೆಗೆ ಮಹಾರಾಷ್ಟ್ರ ಸಿಎಂ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ರಸ್ತೆ ತಡೆ ತೆರವುಗೊಳಿಸಿದರು. ಸ್ಥಳದಲ್ಲಿ ಇನ್ನೂ ಉದ್ವಿಗ್ನ ವಾತಾವರಣ ಇದ್ದು ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಆರೋಪಿ 2015 ರಲ್ಲಿಯೂ ಅತ್ಯಾಚಾರ ಎಸಗಿರುವುದಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.