ಅಲಹಾಬಾದ್, ಮೇ. 02 (DaijiworldNews/AA): ಕಾರಣಗಳನ್ನು ನೀಡದೆ ವ್ಯಕ್ತಿಯೋರ್ವನನ್ನು 3 ತಿಂಗಳ ಕಾಲ ಜೈಲಿನಲ್ಲಿ ಇರಿಸಿದ್ದ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಸಂವಿಧಾನಬಾಹಿರ ಎಂದು ಘೋಷಿಸಿ 10 ಲಕ್ಷ ರೂ. ದಂಡವನ್ನು ವಿಧಿಸಿದೆ.

ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಬ್ದುಲ್ ಮೊಯಿನ್ ಮತ್ತು ನ್ಯಾಯಮೂರ್ತಿ ಪ್ರಮೋದ್ ಕುಮಾರ್ ಶ್ರೀವಾಸ್ತವ ಅವರ ವಿಭಾಗೀಯ ಪೀಠವು, ಈ ಅಕ್ರಮ ಬಂಧನಕ್ಕೆ ಕಾರಣರಾದ ಅಧಿಕಾರಿಗಳಿಂದ ರಾಜ್ಯ ಸರ್ಕಾರವು ಈ ದಂಡದ ಮೊತ್ತವನ್ನು ವಸೂಲಿ ಮಾಡಬಹುದು. ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳ ಸ್ಥಿತಿಯೇ ಹೀಗಿದ್ದರೆ, ರಾಜ್ಯದ ಇತರ ಅಧಿಕಾರಿಗಳು ಯಾವ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ಅಲಹಾಬಾದ್ ಹೈಕೋರ್ಟ್, ಯಾವುದೇ ವ್ಯಕ್ತಿಯನ್ನು ಬಂಧಿಸಲು ಲಿಖಿತ ಆಧಾರಗಳನ್ನು ಒದಗಿಸುವುದು ಸಾಂವಿಧಾನಿಕ ಬಾಧ್ಯತೆಯಾಗಿದೆ. ಇದನ್ನು ನಿರ್ಲಕ್ಷಿಸುವುದು ನಾಗರಿಕರ ಮೂಲಭೂತ ಹಕ್ಕುಗಳ ನೇರ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದೆ.
ಮನೋಜ್ ಕುಮಾರ್ ಎಂಬುವವರನ್ನು ಜನವರಿ 27ರಂದು ಉನ್ನಾವೊ ಜಿಲ್ಲೆಯ ಅಸಿವಾನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ಬಂಧನದ ನಂತರ ಅವರನ್ನು 3 ತಿಂಗಳು ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಅವರ ವಿರುದ್ಧ ಪೊಲೀಸರು ಯಾವುದೇ ಆರೋಪಗಳನ್ನು ದಾಖಲಿಸಲು ವಿಫಲರಾಗಿದ್ದಾರೆ. ಪೊಲೀಸರಿಗೆ ಆ ವ್ಯಕ್ತಿಯ ಬಂಧನಕ್ಕೆ ಯಾವುದೇ ಸ್ಪಷ್ಟ ಕಾರಣಗಳನ್ನು ನೀಡಲು ಸಾಧ್ಯವಾಗಲಿಲ್ಲ.