ನವದೆಹಲಿ, ಮೇ. 02 (DaijiworldNews/AK): ಮೇ 14 ರಿಂದ 16 ರ ನಡುವೆ ಭಾರತಕ್ಕೆ ಮುಂಗಾರು ಪ್ರವೇಶವಾಗಲಿದೆ. ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೇಶದ್ಯಾಂತ ಅಸ್ತಿತ್ವದಲ್ಲಿರುವ ಉರಿಬಿಸಿಲು ಪರಿಸ್ಥಿತಿಯಿಂದ ಶೀಘ್ರದಲ್ಲೇ ಪರಿಹಾರ ಸಿಗುವ ಸಾಧ್ಯತೆಯಿದೆ. ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಮೇ 14 ರಿಂದ 16 ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೈಋತ್ಯ ಮಾನ್ಸೂನ್ ಆಗಮನವಾಗಲಿದೆ.
ಹಿಮಾಲಯದ ತಪ್ಪಲಿನ ಕೆಲವು ಭಾಗಗಳು, ಪೂರ್ವ ಕರಾವಳಿ ರಾಜ್ಯಗಳು, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಈ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ದಿನಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಮೇ ತಿಂಗಳಲ್ಲಿ ದೇಶಾದ್ಯಂತ ಸರಾಸರಿ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಇಲಾಖೆ ಗಮನಿಸಿದೆ. ಆದರೆ ಪೂರ್ವ, ಈಶಾನ್ಯ ಮತ್ತು ಪೂರ್ವ ಮಧ್ಯ ಭಾರತದ ಕೆಲವು ಭಾಗಗಳು ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು. ಮೇ ನಲ್ಲಿ ದೇಶದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹವಾಮಾನಶಾಸ್ತ್ರದ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.