ಬೆಂಗಳೂರು, ಮೇ. 02 (DaijiworldNews/AA): ಪಂಚ ರಾಜ್ಯಗಳ ಮತದಾನ ಮುಗಿದ ಕೂಡಲೇ ಕೇಂದ್ರ ಬಿಜೆಪಿ ಸರ್ಕಾರ ವಾಣಿಜ್ಯ ಬಳಕೆ ಅಡುಗೆ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ದರ ಹೆಚ್ಚಳ ಮಾಡಿದ್ದು, ತನ್ನ ಬಡವರ ವಿರೋಧಿ ನೀತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಮಾರ್ಚ್ 1 ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದರ ಸುಮಾರು 1,300 ರೂ. ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಊಟ, ತಿಂಡಿ, ಕಾಫಿ, ಟೀ ದರ ಹೆಚ್ಚಳ ಮಾಡುತ್ತಾರೆ. ಇದರ ಹೊರೆ ಶ್ರೀಸಾಮಾನ್ಯನ ಮೇಲೆ ಬೀಳಲಿದೆ. ಮತದಾನ ಮುಗಿದ ಕೂಡಲೇ ಕೇಂದ್ರ ಬಿಜೆಪಿ ಸರ್ಕಾರ ಬಡ, ಮಧ್ಯಮವರ್ಗದವರ ಬದುಕನ್ನು ದುರ್ಬರ ಮಾಡಲು ಹೊರಟಿದೆ" ಎಂದು ಆಕ್ರೋಶ ಹೊರಹಾಕಿದರು.
"ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಅಡುಗೆ ಅನಿಲ ಪೂರೈಕೆ ಆಗದೆ ಈಗಾಗಲೇ ಹಲವು ಹೋಟೆಲ್ಗಳು ಬಂದ್ ಆಗಿದ್ದು, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಈ ಸನ್ನಿವೇಶದಲ್ಲಿ 993 ರೂ. ಪ್ರತಿ ಸಿಲಿಂಡರ್ ಗೆ ಹೆಚ್ಚಳ ಮಾಡುವ ಮೂಲಕ ಕಾರ್ಮಿಕ ದಿನದಂದು ಕೇಂದ್ರ ಸರ್ಕಾರ ತನ್ನ ಕಾರ್ಮಿಕ ವಿರೋಧಿ ನೀತಿ ಪ್ರದರ್ಶಿಸಿದೆ" ಎಂದು ವಾಗ್ದಾಳಿ ನಡೆಸಿದರು.