ಬೆಂಗಳೂರು,ಮೇ. 02 (DaijiworldNews/AK): ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಏಕಾಏಕಿ ‘ಎಮರ್ಜೆನ್ಸಿ ಅಲರ್ಟ್’ ಸಂದೇಶಗಳು ಬಂದಿವೆ. ಆದರೆ, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಇದು ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ‘ಸೆಲ್ ಬ್ರಾಡ್ಕಾಸ್ಟ್’ ವ್ಯವಸ್ಥೆಯ ಅಧಿಕೃತ ಪರೀಕ್ಷೆಯಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ದೆಹಲಿಯಲ್ಲಿ ಈ ಸ್ವದೇಶಿ ವಿಪತ್ತು ಸಂವಹನ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಭಾರತದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ ಇಂದು ಈ ಪರೀಕ್ಷಾರ್ಥ ಸಂದೇಶಗಳನ್ನು ರವಾನಿಸಲಾಗಿದೆ.
ಈ ತಂತ್ರಜ್ಞಾನವನ್ನು ದೂರಸಂಪರ್ಕ ಇಲಾಖೆ ಮತ್ತು ಸಿ-ಡಾಟ್ ಸಂಸ್ಥೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಇದು ಇಂಟರ್ನೆಟ್ ಅಥವಾ ನೆಟ್ವರ್ಕ್ ದಟ್ಟಣೆಯ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ, ನಿರ್ದಿಷ್ಟ ಪ್ರದೇಶದ ಎಲ್ಲಾ ಮೊಬೈಲ್ ಟವರ್ ಮೂಲಕ ಏಕಕಾಲದಲ್ಲಿ ಸಂದೇಶಗಳನ್ನು ರವಾನಿಸುತ್ತದೆ. ಭೂಕಂಪ, ಸುನಾಮಿ, ಚಂಡಮಾರುತ, ಮಿಂಚು ಅಥವಾ ಅನಿಲ ಸೋರಿಕೆಯಂತಹ ತುರ್ತು ಸಂದರ್ಭಗಳಲ್ಲಿ ಜನರನ್ನು ಕೇವಲ ಸೆಕೆಂಡುಗಳಲ್ಲಿ ಎಚ್ಚರಿಸಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸಮಯ ನೀಡುವ ಉದ್ದೇಶವನ್ನು ಇದು ಹೊಂದಿದೆ.
ಈಗ ಬಂದಿರುವುದು ಕೇವಲ ಪರೀಕ್ಷಾರ್ಥ ಸಂದೇಶ (. ಇದಕ್ಕಾಗಿ ನೀವು ಯಾವುದೇ ಆತಂಕ ಪಡುವ ಅಥವಾ ಲಿಂಕ್ಗಳನ್ನು ಕ್ಲಿಕ್ ಮಾಡುವ ಅವಶ್ಯಕತೆಯಿಲ್ಲ.