ನವದೆಹಲಿ, ಮೇ. 02 (DaijiworldNews/AK): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮತ್ತು ಪಿಎಸ್ಯು ನೌಕರರನ್ನು ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಸ್ಟಿಸ್ ಪಿ.ಎಸ್. ನರಸಿಂಹ ಮತ್ತು ಜಸ್ಟಿಸ್ ಜಾಯ್ಮಲ್ಯ ಬಾಗ್ಚಿ ಅವರ ಪೀಠ ವಿಚಾರಣೆ ನಡೆಸಿತು.
ಟಿಎಂಸಿ ಪರ ವಕೀಲ ಕಪಿಲ್ ಸಿಬಲ್ ಅವರು ಚುನಾವಣಾ ಆಯೋಗದ ಸುತ್ತೋಲೆಯನ್ನು ಪ್ರಶ್ನಿಸಿದರು. ಇದು ರಾಜ್ಯ ಸರ್ಕಾರಿ ನೌಕರರನ್ನು ಉದ್ದೇಶಪೂರ್ವಕವಾಗಿ ಹೊರಗಿಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಬಾಗ್ಚಿ, ಚುನಾವಣಾ ಆಯೋಗದ ನಿಯಮಗಳು ಸ್ಪಷ್ಟವಾಗಿವೆ. ಮತ ಎಣಿಕೆ ಸೂಪರ್ವೈಸರ್ ಮತ್ತು ಅಸಿಸ್ಟೆಂಟ್ಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಿಂದ ನೇಮಿಸಬಹುದು ಎಂದು ಹೇಳಿದೆ ಹೀಗಾಗೀ ಆಯೋಗವು ಕೇಂದ್ರ ನೌಕರರನ್ನು ಮಾತ್ರ ನೇಮಿಸುವುದು ನಿಯಮ ವಿರುದ್ಧವಲ್ಲ ಎಂದು ಹೇಳಿತು
ಆಯೋಗವು ತನ್ನ ಏಪ್ರಿಲ್ 13ರ ಸುತ್ತೋಲೆಯನ್ನು ಪೂರ್ಣವಾಗಿ ಅನುಸರಿಸುವುದಾಗಿ, ಅಗತ್ಯ ಮುನ್ನಚ್ಚರಿಗೆ ವಹಿಸುವುದು, ಮತ ಎಣಿಕೆ ವಿಡಿಯೋ, ಸಿಸಿಟಿವಿ ವಿಡಿಯೋಗಳನ್ನು 45 ದಿನಗಳ ವರೆಗೂ ಸಂರಕ್ಷಿಸುವ ಭರವಸೆ ನೀಡಿದ್ದರಿಂದ ಕೋರ್ಟ್ ಹೆಚ್ಚುವರಿ ಯಾವುದೇ ಆದೇಶ ಹೊರಡಿಸಲು ನಿರಾಕರಿಸಿತು.