ಮಹಾರಾಷ್ಟ್ರ, ಮೇ. 02 (DaijiworldNews/AA): ಯುಪಿಎಸ್ಸಿ ಪರೀಕ್ಷೆಯನ್ನು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ನಂತಹ ಉನ್ನತ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಕೆಲ ಅಭ್ಯರ್ಥಿಗಳು ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಆದರೆ ಕೆಲ ಅಭ್ಯರ್ಥಿಗಳು ತಮ್ಮ ಎರಡು-ಮೂರು ಪ್ರಯತ್ನಗಳ ಬಳಿಕ ಉತ್ತೀರ್ಣರಾಗುತ್ತಾರೆ. ಹೀಗೆ ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ತೇಜಸ್ವಿ ದೇಶಪಾಂಡೆ ಅವರ ಯಶೋಗಾಥೆ ಇದು.

ತೇಜಸ್ವಿ ದೇಶಪಾಂಡೆ ಅವರು ಮಹಾರಾಷ್ಟçದ ಛತ್ರಪತಿ ಸಂಭಾಜಿನಗರದ ನಿವಾಸಿ. ತೇಜಸ್ವಿ ಅವರ ತಂದೆ ಡಾ. ಪ್ರಸಾದ್ ದೇಶಪಾಂಡೆ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾಗಿದ್ದರೆ, ತಾಯಿ ಡಾ. ಗೌರಿ ದೇಶಪಾಂಡೆ ಅವರು ದಂತ ವೈದ್ಯರಾಗಿದ್ದಾರೆ.
ತೇಜಸ್ವಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ನಾಥ್ ವ್ಯಾಲಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದರು. ಅವರು ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದರು. ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ 2021ರಲ್ಲಿ ಯುಪಿಎಸ್ಸಿ ಪರೀಕ್ಷೆಯ ತಯಾರಿ ಆರಂಭಿಸಿದ್ದರು.
ತೇಜಸ್ವಿ ಅವರು ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲರಾದರು. ಆದರೆ ಧೃತಿಗೆಡದ ಅವರು 2024ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 99ನೇ ಅಖಿಲ ಭಾರತ ರ್ಯಾಂಕ್ ಪಡೆದು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಮೂಲಕ ಅನೇಕ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.