ಲಖನೌ, ಮೇ. 01 (DaijiworldNews/AA): ವಿಮಾನ ನಿಲ್ದಾಣದಲ್ಲಿ ಮಂಗಗಳ ಗುಂಪು ರನ್ವೇ ದಾಟುತ್ತಿರುವುದು ಕಂಡುಬಂದ ಹಿನ್ನೆಲೆ ಇಂಡಿಗೋ ವಿಮಾನ ಟೇಕ್ ಆಫ್ ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಲಖನೌ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.

ಈ ಇಂಡಿಗೋ ವಿಮಾನ ಸುಮಾರು 150 ಪ್ರಯಾಣಿಕರನ್ನು ಹೊತ್ತು ರಾಯಪುರಕ್ಕೆ ತೆರಳುತ್ತಿತ್ತು. ಲಖನೌ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ರನ್ ವೇಯಿಂದ ಸ್ವಲ್ಪ ಕೆಳಗೆ ಹಾರಾಟ ನಡೆಸುವಾಗ ಮಂಗಗಳ ಗುಂಪೊಂದು ರನ್ ದಾಟುತ್ತಿರುವುದನ್ನು ಪೈಲಟ್ ನೋಡಿದ್ದಾರೆ. ಈ ಹಿನ್ನೆಲೆ ಪೈಲಟ್ ತಕ್ಷಣ ಟೇಕ್ ಆಫ್ ರದ್ದುಗೊಳಿಸಿ ವಾಯು ಸಂಚಾರ ನಿಯಂತ್ರಣಕ್ಕೆ ಮಾಹಿತಿ ರವಾನಿಸಿದ್ದಾರೆ.
ನಂತರ ವಿಮಾನ ಹಿಂತಿರುಗಿದ್ದು, ಸುಮಾರು ಒಂದು ಗಂಟೆಯ ನಂತರ ಇಂಧನ ತುಂಬಿಸಿಕೊಂಡು ಹೊರಟಿದೆ. ಇದರಿಂದಾಗಿ ಇತರ ಕೆಲವು ವಿಮಾನಗಳ ನಿರ್ಗಮನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿದೆ.
ಘಟನೆಯ ನಂತರ ವಿಮಾನ ನಿಲ್ದಾಣದ ವನ್ಯಜೀವಿ ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿ ಮಂಗಗಳನ್ನು ಓಡಿಸಿ, ರನ್ವೇಯನ್ನು ತೆರವುಗೊಳಿಸಿತು. ಬಳಿಕ ವಿಮಾನ ಕಾರ್ಯಾಚರಣೆಗಳು ಸಾಮಾನ್ಯವಾಗಿ ಪುನರಾರಂಭಗೊಂಡವು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.