ಬೆಂಗಳೂರು, ಮೇ. 01(DaijiworldNews/TA): ದೇಶಾದ್ಯಂತ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ದರ ಏರಿಕೆ ವಿಚಾರ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯದ ಹೋಟೆಲ್ ಮಾಲೀಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಚುನಾವಣೆಗಳು ಮುಗಿದ ತಕ್ಷಣವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಮ್ಮೆ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಅವಧಿಯಲ್ಲಿ ದರ ಏರಿಕೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದು, ಇದೀಗ ಮೇ 1ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ರೂ.993 ರಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಒಂದು ಸಿಲಿಂಡರ್ ಬೆಲೆ ರೂ.3,071.50ಕ್ಕೆ ಏರಿದೆ ಎಂದು ಅವರು ತಿಳಿಸಿದ್ದಾರೆ.
ಕೇವಲ ನಾಲ್ಕು ತಿಂಗಳಲ್ಲಿ ಆರು ಬಾರಿ ಬೆಲೆ ಏರಿಕೆ ಮಾಡಲಾಗಿದ್ದು, ಒಟ್ಟು ರೂ. 1,518 ಹೆಚ್ಚುವರಿ ಹೊರೆ ಸಾಮಾನ್ಯ ಜನರ ಮೇಲೆ ಬಿದ್ದಿದೆ ಎಂದು ಸಿಎಂ ಹೇಳಿದ್ದಾರೆ. ಜಾಗತಿಕ ಸವಾಲುಗಳ ಸಮಯದಲ್ಲಿ ಜನರನ್ನು ರಕ್ಷಿಸುವ ಬದಲು, ಸರ್ಕಾರವೇ ಜನರ ಮೇಲೆ ಆರ್ಥಿಕ ಭಾರ ಹಾಕುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಈ ದರ ಏರಿಕೆಯ ಪರಿಣಾಮವಾಗಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಸಣ್ಣ ಆಹಾರ ವ್ಯಾಪಾರಗಳು ತಮ್ಮ ದರಗಳನ್ನು ಹೆಚ್ಚಿಸಲು ಅನಿವಾರ್ಯವಾಗುತ್ತದೆ. ಇದರಿಂದ ಸಾಮಾನ್ಯ ಜನರ ದಿನನಿತ್ಯದ ಖರ್ಚು ಹೆಚ್ಚಾಗುವುದಲ್ಲದೆ, ಕಾರ್ಮಿಕ ವರ್ಗ ಮತ್ತು ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ತೊಂದರೆ ಉಂಟಾಗಲಿದೆ ಎಂದು ಸಿಎಂ ಎಚ್ಚರಿಸಿದ್ದಾರೆ.
“ಕಾರ್ಮಿಕ ದಿನದಂದೇ ಈ ರೀತಿಯ ಬೆಲೆ ಏರಿಕೆ ಮಾಡಿರುವುದು ಕಾರ್ಮಿಕ ವರ್ಗಕ್ಕೆ ನೀಡಿದ ‘ಉಡುಗೊರೆ’ಯಂತೆ ಕಾಣುತ್ತಿದೆ” ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಒಂದು ಕಪ್ ಚಹಾದಿಂದ ಹಿಡಿದು ಸಣ್ಣ ತಿಂಡಿಗಳವರೆಗೂ ಎಲ್ಲದರ ಬೆಲೆ ಏರಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇದು ಕೇವಲ ಆರಂಭ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಗಳು ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ಸಿಎಂ, “ಚುನಾವಣೆ ವೇಳೆ ಜನರನ್ನು ದಾರಿ ತಪ್ಪಿಸಿ, ನಂತರ ಅವರ ಮೇಲೆಯೇ ಹೊರೆ ಹಾಕುವುದು ಇದೇ ಮೋದಿ ಮಾದರಿ” ಎಂದು ತೀವ್ರವಾಗಿ ಟೀಕಿಸಿದ್ದಾರೆ.