ಕಲಬುರಗಿ, ಮೇ. 01 (DaijiworldNews/AA): ಮುಖ್ಯಮಂತ್ರಿ ಬದಲಾವಣೆ ಮಾಡುವ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೊ ಇಲ್ಲವೋ ಎಂಬುದನ್ನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಸಿಎಂ ಬದಲಾವಣೆ ಕುರಿತು ಚರ್ಚಿಸಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಸಮಯ ನಿಗದಿಯಾದ ಮೇಲೆ ನಾವು ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಳ್ಳುತ್ತೇವೆ. ಸಿಎಂ ಬದಲಾವಣೆ ಕುರಿತು ಸುಮ್ಮನೆ ತಪ್ಪು ಸಂದೇಶ ಕೊಡಬೇಡಿ. ಏನು ನಿರ್ಣಯ ತೆಗೆದುಕೊಂಡರೆ ಪಕ್ಷಕ್ಕೆ ಏನು ಪರಿಣಾಮ ಆಗುತ್ತದೆ ಎನ್ನುವುದನ್ನು ಚರ್ಚಿಸಿ ನಿರ್ಧರಿಸುತ್ತೇವೆ. ಮತ್ತು ರಾಜ್ಯದ ಹಿತದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳುತ್ತೇವೆ. ಅದನ್ನ ಎಲ್ಲರೂ ಬೆಂಬಲಿಸಬೇಕು" ಎಂದು ಹೇಳಿದರು.
ಎಲ್ಪಿಜಿ ದರ ಹೆಚ್ಚಳವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಕಾಏಕಿ 993 ರೂ. ಹೆಚ್ಚಳ ಮಾಡಿದ್ದಾರೆ. ಸಿಲಿಂಡರ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ರಾತ್ರೋರಾತ್ರಿ ದರ ಹೆಚ್ಚಳ ಮಾಡುವ ಮೂಲಕ ಜನರಿಗೆ ಆಘಾತ ನೀಡಿದ್ದಾರೆ. ಇಷ್ಟಾಗಿಯೂ ಜನರು ಅವರನ್ನು ಬೆಂಬಲಿಸುತ್ತಿರುವುದು ಅಚ್ಚರಿ ತಂದಿದೆ" ಎಂದು ವಾಗ್ದಾಳಿ ನಡೆಸಿದರು.