ಬೆಂಗಳೂರು, ಮೇ. 01 (DaijiworldNews/AA): ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಲಹದಿಂದ ಹೆಚ್ಚು ಗೊಂದಲ ಉಂಟಾಗಿದೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ಆಗಲು ಪ್ರಯತ್ನ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಸಿಎಂ ಕುರ್ಚಿ ಕಲಹದಿಂದಾಗಿ ಇಡೀ ಸರ್ಕಾರ ಗೊಂದಲದ ಗೂಡಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೊಸ ಹೇಳಿಕೆ ನೀಡಿ ಇನ್ನಷ್ಟು ಗೊಂದಲ ಉಂಟುಮಾಡಿದ್ದಾರೆ. ಮುಂದೆ ನನ್ನ ಪರ್ವ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದು, ಆ ಪರ್ವಕ್ಕೆ ಕಲ್ಲು ಬಿದ್ದಿದೆ. ಈಗ ಮಲ್ಲಿಕಾರ್ಜುನ ಖರ್ಗೆ ಮಧ್ಯ ಪ್ರವೇಶ ಮಾಡಿ ನನಗೂ ಆಸೆಯಿದೆ, ಹಿಂದೆ ನನಗೆ ಮೋಸವಾಗಿದೆ ಎಂದು ಹೇಳಿದ್ದಾರೆ. ಬಹುಶಃ ಕಾಂಗ್ರೆಸ್ ಹೈಕಮಾಂಡ್ನಿಂದ ಅವರು ಸಿಎಂ ಆಗಲು ಗ್ರೀನ್ ಸಿಗ್ನಲ್ ಸಿಕ್ಕಿರಬಹುದು" ಎಂದು ಹೇಳಿದರು.
"ಖರ್ಗೆ ಸಿಎಂ ಆಗಬೇಕೆಂದು ಈಗಾಗಲೇ ಎಲ್ಲರೂ ಹೇಳಿದ್ದಾರೆ. ನಾನು ಸಿಎಂ ಆಗಲು ಸಿದ್ಧನಿದ್ದೇನೆ ಎಂದು ಖರ್ಗೆ ತಿಳಿಸಿದ್ದಾರೆ. ಇದುವರೆಗೆ ಅವರು ಬಹಳ ಪ್ರಯತ್ನ ಮಾಡಿದ್ದರೂ ಸಿಎಂ ಆಗಿರಲಿಲ್ಲ. ಈ ಸಮಯದಲ್ಲಾದರೂ ಸಿಎಂ ಆಗೋಣ ಎಂದು ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲೀಗ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತಾಗಿದೆ" ಎಂದು ತಿಳಿಸಿದರು.
"ಸಿನಿಮಾದ ಕ್ಲೈಮಾಕ್ಸ್ನಲ್ಲಿ ಆಗುವಂತೆಯೇ ಮಲ್ಲಿಕಾರ್ಜುನ ಖರ್ಗೆ ಬಂದಿದ್ದಾರೆ. ಮಾತುಕತೆಗೆ ಇನ್ನಷ್ಟು ಸಮಯಬೇಕೆಂದು ಅವರು ಹೇಳಿದ್ದಾರೆ. ಹಾಗೆಯೇ ಆದರೆ ಸಿಎಂ ಬದಲಾವಣೆ ಬಹಳ ತಡವಾಗುತ್ತದೆ. ಆ ವೇಳೆಗೆ ಚುನಾವಣೆ ಸಮೀಪ ಬಂದಿರುತ್ತದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಾದಂತೆ ಕಾಂಗ್ರೆಸ್ ಗೊಂದಲದ ಗೂಡಾಗಿ ಸರ್ವನಾಶವಾಗಲಿದೆ" ಎಂದರು.