ಬೆಂಗಳೂರು, ಮೇ 01(DaijiworldNews/AK): ನೌಕರರ ವೇತನಕ್ಕೂ ಹಣ ನೀಡಲಾಗದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಭ್ರಷ್ಟ್ರಚಾರ ಮಿತಿಮೀರಿ ಹೋಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವುದರಲ್ಲಿ ತೊಡಗಿದೆ ಎಂದು ದೂರಿದರು.
ಆಡಳಿತ ಪಕ್ಷದ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಮುಖ್ಯಮಂತ್ರಿ ಕುರ್ಚಿಗೆ ದಿನೇ ದಿನೇ ಪೈಪೋಟಿ ಹೆಚ್ಚಾಗಿದೆ. ಆಡಳಿತ ಪಕ್ಷದ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಒಮ್ಮೆ ಡಿ.ಕೆ.ಶಿವಕುಮಾರ್ ಬೆಂಬಲಿಗರು ದೆಹಲಿಗೆ ಹೋದರೆ ಮತ್ತೊಮ್ಮೆ ಸಿದ್ದರಾಮಯ್ಯ ಅವರ ಬೆಂಬಲಿಗರು ದೆಹಲಿಯಲ್ಲಿ ಬೀಡು ಬಿಡುತ್ತಾರೆ. ಇವರೇನು ನಮ್ಮ ರಾಜ್ಯದ ಶಾಸಕರೋ ಅಥವಾ ದೆಹಲಿ ಶಾಸಕರೋ ಎಂಬ ಅನುಮಾನ ಬರುತ್ತಿದೆ ಎಂದರು
ಕೀಳುಮಟ್ಟಕ್ಕೆ ಪೊಲೀಸ್ ಇಲಾಖೆ
ಧಾರವಾಡದಲ್ಲಿ ಆದಿತ್ಯ ಮ್ಯಾಗೇರಿ ಎಂಬ ಕಾಲೇಜಿಗೆ ಹೋಗುವ ಯುವಕನನ್ನು ಪೊಲೀಸ್ ಇಲಾಖೆಯವರು ಡ್ರಗ್ಸ್ ಪ್ರಕರಣನಲ್ಲಿ ವಿನಾಕಾರಣ ಸಿಲುಕಿಸಿದರು. ಅವನು ನಿರಪರಾಧಿ ಎಂದು ಗೊತ್ತಾದ ನಂತರವೂ ತಂದೆ ಇಲ್ಲದೆ ಇರುವ ಆತನ ತಾಯಿ ಪೀಡಿಸಿ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆ ಎಷ್ಟೋಂದು ಕೀಳುಮಟ್ಟಕ್ಕೆ ಹೋಗಿದೆ ಎಂದು ಇದರಿಂದ ಗೊತ್ತಾಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮಾನ ಮರ್ಯಾದೆ ಇದ್ದರೆ ಈ ಘಟನೆಯಿಂದ ಎಚ್ಚೆತ್ತುಕೊಂಡು ಯಾವ ಅಧಿಕಾರಿಗಳು ಈ ಪ್ರಕರಣದ ಹಿಂದೆ ಇದ್ದಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಡ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.