ನವದೆಹಲಿ, ಮೇ. 01(DaijiworldNews/TA): ಭಾರತೀಯರ, ವಿಶೇಷವಾಗಿ ದಕ್ಷಿಣ ಭಾರತದ ಹೆಮ್ಮೆಯ ಆಹಾರವಾದ ಮಸಾಲೆ ದೋಸೆ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಪ್ರಸಿದ್ಧ ಅಂತರಾಷ್ಟ್ರೀಯ ಆಹಾರ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಪ್ರಕಟಿಸಿರುವ ಮೇ 2026ರ ವಿಶ್ವದ ‘50 ಅತ್ಯುತ್ತಮ ಪ್ಯಾನ್ಕೇಕ್ಗಳ’ ಪಟ್ಟಿಯಲ್ಲಿ ಮಸಾಲ ದೋಸೆಗೆ 6ನೇ ಸ್ಥಾನ ಲಭಿಸಿದೆ. ಈ ಮೂಲಕ ವಿಶ್ವದ ವಿವಿಧ ಖಾದ್ಯಗಳನ್ನು ಹಿಂದಿಕ್ಕಿ, ಭಾರತೀಯ ಆಹಾರ ಪದ್ಧತಿಯ ಖ್ಯಾತಿಯನ್ನು ಮತ್ತಷ್ಟು ಎತ್ತಿಹಿಡಿದಿದೆ.

ಟೇಸ್ಟ್ ಅಟ್ಲಾಸ್ ವರದಿ ಪ್ರಕಾರ, ಜಗತ್ತಿನ ವಿವಿಧ ಭಾಗಗಳ ಆಹಾರ ಪ್ರಿಯರು ಮತ್ತು ವಿಮರ್ಶಕರು ನೀಡಿರುವ ಮೌಲ್ಯಮಾಪನದ ಆಧಾರದ ಮೇಲೆ ಮಸಾಲ ದೋಸೆಗೆ 4.3 ಸ್ಟಾರ್ ರೇಟಿಂಗ್ ದೊರೆತಿದೆ. ಒಟ್ಟು 50 ಖಾದ್ಯಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ಮಸಾಲ ದೋಸೆ ತನ್ನ ವಿಶಿಷ್ಟ ರುಚಿ ಮತ್ತು ವಿನ್ಯಾಸದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗರಿಗರಿಯಾದ ದೋಸೆ, ಒಳಗಿನ ಮಸಾಲೆಯುತ ಆಲೂಗಡ್ಡೆ ಪಲ್ಯ ಮತ್ತು ಚಟ್ನಿ-ಸಾಂಬಾರ್ ಜೊತೆಗೆ ಸವಿಯುವ ಪದ್ಧತಿಯನ್ನು ವಿಶೇಷವಾಗಿ ಶ್ಲಾಘಿಸಲಾಗಿದೆ.
ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ‘ಪ್ಯಾನ್ಕೇಕ್’ ಎಂದರೆ ಸಿಹಿಯಾದ ತಿಂಡಿ ಎಂಬ ಅಭಿಪ್ರಾಯವಿದೆ. ಆದರೆ ಖಾರದ ಮತ್ತು ಸತ್ವಯುತ ರುಚಿಯ ಮಸಾಲ ದೋಸೆ ಈ ಕಲ್ಪನೆಯನ್ನು ಮೀರಿಸಿ, ಜಾಗತಿಕ ಆಹಾರ ಪ್ರಿಯರ ಗಮನ ಸೆಳೆದಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಾಗುವ ಈ ದೋಸೆ ಆರೋಗ್ಯಕರವಾಗಿದ್ದು, ರುಚಿ ಮತ್ತು ಪೌಷ್ಟಿಕತೆಯ ಸಂಯೋಜನೆಯಾಗಿ ಗುರುತಿಸಿಕೊಂಡಿದೆ.
ಈ ಸಾಧನೆಯ ಸುದ್ದಿ ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಭ್ರಮ ವ್ಯಕ್ತವಾಗಿದೆ. “ದೋಸೆ ಲವರ್ಸ್” ಮಸಾಲ ದೋಸೆಯನ್ನು ಕೇವಲ ಆಹಾರವಲ್ಲ, ಒಂದು ಭಾವನೆ ಎಂದು ವರ್ಣಿಸುತ್ತಿದ್ದಾರೆ. ಇದಕ್ಕೂ ಮುನ್ನ ಇದೇ ಟೇಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಭಾರತದ ರೊಟ್ಟಿ, ನಾನ್ ಮತ್ತು ಸಮೋಸಾ ಕೂಡ ಸ್ಥಾನ ಪಡೆದಿದ್ದವು. ಇದೀಗ ಮಸಾಲ ದೋಸೆಯ ಸೇರ್ಪಡೆಯಿಂದ ಭಾರತೀಯ ಪಾಕಶಾಲೆಯ ಶ್ರೀಮಂತಿಕೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬೆಳಗಿದೆ.
ಪ್ಯಾನ್ಕೇಕ್ ಎಂಬುದು ಹಿಟ್ಟು, ಮೊಟ್ಟೆ, ಹಾಲು ಮತ್ತು ಬೆಣ್ಣೆಯಿಂದ ತಯಾರಿಸುವ ತೆಳುವಾದ ತಿಂಡಿ. ಇದನ್ನು ಸಾಮಾನ್ಯವಾಗಿ ತವೆಯಲ್ಲಿ ಬೇಯಿಸಿ, ಜೇನುತುಪ್ಪ ಅಥವಾ ಮೇಪಲ್ ಸಿರಪ್ ಜೊತೆ ಸವಿಯಲಾಗುತ್ತದೆ. ತಯಾರಿಕೆಯ ದೃಷ್ಟಿಯಿಂದ ಇದು ದೋಸೆಯನ್ನು ಹೋಲಿಸಿದರೂ, ರುಚಿ ಮತ್ತು ವಿನ್ಯಾಸದಲ್ಲಿ ವ್ಯತ್ಯಾಸವಿದೆ. ಆದರೂ, ಮಸಾಲ ದೋಸೆ ತನ್ನದೇ ಆದ ವಿಶಿಷ್ಟತೆಯಿಂದ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದು ಭಾರತೀಯ ಅಡುಗೆ ಪರಂಪರೆಯನ್ನು ಮತ್ತೊಮ್ಮೆ ವಿಶ್ವದ ಮುಂದೆ ಪ್ರತಿಷ್ಠಿತವಾಗಿ ಪರಿಚಯಿಸಿದೆ.