ನವದೆಹಲಿ, ಏ. 27 (DaijiworldNews/AA): ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಗೆ ತಾವು ಅಥವಾ ತಮ್ಮ ಪರ ವಕೀಲರು ಹಾಜರಾಗುವುದಿಲ್ಲ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಲಿಖಿತವಾಗಿ ತಿಳಿಸಿದ್ದಾರೆ.

ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠದ ಮುಂದೆ ನಡೆಯುತ್ತಿರುವ ವಿಚಾರಣೆಗೆ ತಾವು ಅಥವಾ ತಮ್ಮ ಪರ ವಕೀಲರು ಹಾಜರಾಗುವುದಿಲ್ಲ. ವಿಚಾರಣೆಗೆ ಹಾಜರಾಗದಿದ್ದರೆ ಕಾನೂನಾತ್ಮಕವಾಗಿ ತನಗೆ ತೊಂದರೆಯಾಗಬಹುದು ಮತ್ತು ಏಕಪಕ್ಷೀಯ ಆದೇಶ ಹೊರಬರಬಹುದು ಎಂಬ ಅರಿವು ತನಗಿದೆ. ಹೀಗಿದ್ದರೂ 'ತಪ್ಪು ವ್ಯವಸ್ಥೆಯ' ಮುಂದೆ ಮಂಡಿಯೂರುವುದಕ್ಕಿಂತ ಆ ಶಿಕ್ಷೆಯನ್ನು ಅನುಭವಿಸಲು ಸಿದ್ಧ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
"ನ್ಯಾಯಾಂಗದ ನೈತಿಕತೆಯನ್ನು ಎತ್ತಿ ಹಿಡಿಯಲು ನಾನು ಈ ಅಹಿಂಸಾತ್ಮಕ ಮಾರ್ಗವನ್ನು ಅನುಸರಿಸುತ್ತಿದ್ದೇನೆ. ಸತ್ಯಾಗ್ರಹವೆಂದರೆ ಕೇವಲ ಪ್ರತಿರೋಧವಲ್ಲ, ಬದಲಾಗಿ ಅಧಿಕಾರದಲ್ಲಿರುವವರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ನೀಡುವ ಅವಕಾಶ. ಮೊದಲು ಅನ್ಯಾಯವನ್ನು ಸರಿಪಡಿಸಲು ಅಧಿಕೃತವಾಗಿ ವಿನಂತಿಸುವುದು. ಮನವಿ ವಿಫಲವಾದಾಗ ಮಾತ್ರ ಅಹಿಂಸಾತ್ಮಕವಾಗಿ ಸಹಕರಿಸದಿರುವುದು ಸತ್ಯಾಗ್ರಹದ ನಿಜವಾದ ಶಿಸ್ತು. ನ್ಯಾಯ ಸಿಗುವುದು ಮಾತ್ರವಲ್ಲ, ಅದು ಸಿಗುತ್ತಿದೆ ಎಂದು ಜನರಿಗೆ ಕಾಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.