ಲಕ್ನೋ, ಏ. 20 (DaijiworldNews/AA): ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದು, ದ್ರೌಪದಿ ವಸ್ತ್ರಾಪಹರಣಕ್ಕೆ ಸಮ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ.

"ಸಂಸತ್ನಲ್ಲಿ ಕಾಂಗ್ರೆಸ್, ಎಸ್ಪಿ, ಟಿಎಂಸಿ ಮತ್ತು ಡಿಎಂಕೆ ವರ್ತಿಸಿದ ರೀತಿಯು ದ್ರೌಪದಿಯ ವಸ್ತ್ರಾಪಹರಣ ದೃಶ್ಯದಂತಿತ್ತು. ವಿರೋಧ ಪಕ್ಷದ ನಾಯಕರು ಮಾಡಿದ ಬೇಜವಾಬ್ದಾರಿ ಹೇಳಿಕೆಗಳು, ಅವರು ಪ್ರದರ್ಶಿಸಿದ ನಡವಳಿಕೆ ಎಲ್ಲರಿಗೂ ತಿಳಿದಿದೆ" ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಬೇಡಿಕೆಯ ಬಗ್ಗೆ ಸಮಾಜವಾದಿ ಪಕ್ಷದ ನಿಲುವಿನ ಬಗ್ಗೆ ಮಾತನಾಡಿದ ಅವರು, "ಮಹಿಳಾ ಸಬಲೀಕರಣದ ಗುರಿಯನ್ನು ಹೊಂದಿರುವ ಶಾಸನದ ಬಗ್ಗೆ ಅಪ್ರಸ್ತುತ ವಿಷಯಗಳನ್ನು ಎತ್ತುವ ಪ್ರಯತ್ನಗಳು ನಡೆಯುತ್ತಿವೆ. ಅವರು ಸಂವಿಧಾನವನ್ನು ಪ್ರಾರ್ಥಿಸುತ್ತಾರೆ. ಆದರೆ, ಡಾ. ಬಿ.ಆರ್.ಅಂಬೇಡ್ಕರ್ ಅವರ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.